ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಜಲ ಜೀವನ್ ಮಿಷನ್ ನಲ್ಲಿಗಳ ಮೀಟರ್ಗಳು ನಿರಂತರವಾಗಿ ಕಳ್ಳತನವಾಗುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಹಿರೇಕೋಗಲೂರು, ನಲ್ಲೂರು, ಕೆರೆಬಿಳಚಿ, ಕೊಂಪನಹಳ್ಳಿ, ಸಂತೆಬೆನ್ನೂರ ಸೇರಿದಂತೆ ಹಲವಾರು ಕಡೆ 100ಕ್ಕೂ ಹೆಚ್ಚು ವಾಟರ್ ಮೀಟರ್ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಸಿಸಿ ಕ್ಯಾಮೆರಾ ಇಲ್ಲದ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು, ಕಾಮಗಾರಿ ಮುಗಿದು ನೀರು ಪೂರೈಕೆಯಾಗುತ್ತಿದ್ದ ಮನೆಗಳ ಮುಂದಿನ ಮೀಟರ್ಗಳನ್ನು ಗುರಿಯಾಗಿಸಿ ಕಳ್ಳತನ ಮಾಡಲಾಗುತ್ತಿದೆ.
ಕಳವಾಗಿರುವ ಒಂದು ವಾಟರ್ ಮೀಟರ್ನ ಅಂದಾಜು ಮೌಲ್ಯ 900 ರೂಪಾಯಿಗಳಾಗಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದು, ಕೆಲವರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.



















