ಹಾಸನ : ಬೇಲೂರು ತಾಲೂಕಿನ ಕಾನಳ್ಳಿ ಅರಣ್ಯ ಪ್ರದೇಶದಲ್ಲಿದ್ದ ದೈತ್ಯಾಕಾರದ ನರಹಂತಕ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೊನೆಗೂ ಸೆರೆಹಿಡಿದಿದ್ದಾರೆ.
ಇಂದು (ಏ.18) ಮೂರನೇ ದಿನದ ಕಾರ್ಯಾಚರಣೆ ಆರಂಭಿಸಿದ್ದ ಇಟಿಎಫ್ ಸಿಬ್ಬಂದಿ ಮುಂಜಾನೆಯೇ ಕಾಡಾನೆ ಇರುವ ಸ್ಥಳವನ್ನು ಪತ್ತೆ ಮಾಡಿದ್ದರು. ದೈತ್ಯಾಕಾರದ ಕಾಡಾನೆ ಜೊತೆ ಕ್ಯಾಪ್ಟನ್ ಕಾಡಾನೆ ಸಹ ಇತ್ತು. ಈ ವೇಳೆ ಕುಮ್ಕಿ ಆನೆಗಳೊಂದಿಗೆ ತೆರಳಿ ನರಹಂತಕ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು.
ಚುಚ್ಚುಮದ್ದು ನೀಡುತ್ತಿದ್ದಂತೆ ನರಹಂತಕ ಒಂಟಿಕೋರೆ ಕಾಡಾನೆ ಹಾಗೂ ಕ್ಯಾಪ್ಟನ್ ಕಾಡಾನೆ ಜೊತೆಯಲ್ಲಿಯೇ ಓಡಲಾರಂಭಿಸಿದ್ದವು. ಬೆನ್ನಟ್ಟಿದ ಕಾರ್ಯಾಚರಣೆ ತಂಡ ಎರಡು ಕಾಡಾನೆಗಳನ್ನು ಬೇರ್ಪಡಿಸಿತು. ಸ್ವಲ್ಪ ದೂರು ಓಡಿ ಪ್ರಜ್ಞೆತಪ್ಪಿ ಬಿದ್ದ ಕಾಡಾನೆಯನ್ನು, ಕುಮ್ಕಿ ಆನೆಗಳು ಸುತ್ತುವರಿದವು. ಬಳಿಕ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಿ ಹಗ್ಗದಲ್ಲಿ ಕಟ್ಟಲಾಯಿತು.
ಸದ್ಯ ಕಾಡಾನೆಯನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನರಹಂತಕ ಕಾಡಾನೆ ಸೆರೆಯಿಂದ ಬೇಲೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : ನಮ್ಮ ಮಗಳ ವಿರುದ್ಧದ ಆರೋಪ ಸುಳ್ಳು, ಇದು ಸ್ವಾಮೀಜಿಯ ರಕ್ಷಣೆಗೆ ನಡೆದ ಷಡ್ಯಂತ್ರ ಎಂದ ನಿದಾ ಪೋಷಕರು!



















