ಬೆಂಗಳೂರು : ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಸಂಸ್ಥೆಯ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ನಡೆದಿದೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ AI2651 ಸಂಖ್ಯೆಯ ವಿಮಾನ ರನ್‌ವೇಗೆ ಇಳಿಯುವ ಸಂದರ್ಭದಲ್ಲಿ ಅದರ ಹಿಂಭಾಗ ನೆಲಕ್ಕೆ ಅಪ್ಪಳಿಸಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿಯ ಪ್ರಕಾರ, ಏರ್ ಇಂಡಿಯಾ ಸಂಸ್ಥೆಯ AI2651 ವಿಮಾನ ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತಾಂತ್ರಿಕ ಹಾಗೂ ವಾತಾವರಣದ ಅಡಚಣೆಯಿಂದ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ವಿಮಾನ ಲ್ಯಾಂಡ್ ಆಗುವ ಮೊದಲು ಅದೇ ರನ್‌ವೇಯಿಂದ ಸರಕು ಸಾಗಣೆ ವಿಮಾನವೊಂದು ಟೇಕ್ ಆಫ್ ಆಗಿತ್ತು. ಇದರಿಂದ ಉಂಟಾದ ಗಾಳಿಯ ತೀವ್ರ ಒತ್ತಡ ಮತ್ತು ಅಸ್ಥಿರ ವಾತಾವರಣದಿಂದ ಏರ್ ಇಂಡಿಯಾ ವಿಮಾನದ ಸಮತೋಲನ ತಪ್ಪಿದೆ ಎನ್ನಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೈಲಟ್ ವಿಮಾನವನ್ನು ಪುನಃ ಹಾರಾಟಕ್ಕೆ ತೆಗೆದುಕೊಳ್ಳಲು ಯತ್ನಿಸಿದ ವೇಳೆ ವಿಮಾನದ ಹಿಂಭಾಗ ರನ್‌ವೇಗೆ ಅಪ್ಪಳಿಸಿದೆ ಎಂದು ವರದಿಯಾಗಿದೆ.
ಅವಘಡದ ನಡುವೆಯೂ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸೇಪ್ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಅಧಿಕಾರಿಯೊಬ್ಬರು, “ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ” ಎಂದು ತಿಳಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನಿಖೆಗೆ ಆದೇಶಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕೇವಲ 38 ತಿಂಗಳಲ್ಲಿ ವಿಶ್ವದ ಅತಿದೊಡ್ಡ ರೈಲ್ವೆ ನಿಲ್ದಾಣ ನಿರ್ಮಿಸಿದ ಚೀನಾದ ರೊಬೋಟ್ ಸೈನ್ಯ


















