ಬೆಂಗಳೂರು: ನೀವೇನಾದರೂ ವಾಹನ ಚಾಲನೆ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಬಯಸುತ್ತಿದ್ದೀರಾ? ಹಾಗಾದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನಿಮಗೊಂದು ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರಿಯ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಭಾರಿ, ಲಘು ವಾಹನ ಚಾಲನೆ ತರಬೇತಿ ನೀಡಲು ಮತ್ತು ಉಚಿತವಾಗಿಯೇ ಡ್ರೈವಿಂಗ್ ಲೈಸೆನ್ಸ್ ಕೂಡ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳಿಗೆ ಉಚಿತವಾಗಿ 30 ದಿನ ತರಬೇತಿ ನೀಡಲಾಗುತ್ತದೆ.
ಸರ್ಕಾರದ ಯೋಜನೆಯ ಮೂಲಕ ಲಘು ವಾಹನ (LMV) ಹಾಗೂ ಭಾರಿ ವಾಹನ (HMV) ಚಾಲನಾ ತರಬೇತಿ ಪಡೆಯಬಹುದು. ಕೆಲವು ತರಬೇತಿ ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ ಒದಗಿಸಲಾಗುತ್ತದೆ. ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಯೋಜನೆ ಜಾರಿಗೆ ತರಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದವರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬಹುದು.
ರಾಜ್ಯದ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಮತ್ತು ಹೊಳಲ್ಕೆರೆ ಸೇರಿದಂತೆ ಆಯ್ದ ತರಬೇತಿ ಕೇಂದ್ರಗಳಲ್ಲಿ ತರಬೇತಿ ಕೆಎಸ್ಸಾರ್ಟಿಸಿಯು ತರಬೇತಿ ನೀಡುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಆಯಾ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ವಾಹನ ಚಾಲನಾ ಪರವಾನಗಿ ಬಳಿಕ ಸಾರಿಗೆ, ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲವೇ, ಸ್ವಂತ ವಾಹನ ಖರೀದಿ ಮಾಡಿ ಜೀವನ ಸಾಗಿಸಬಹುದಾಗಿದೆ.
ಯಾವ ದಾಖಲೆ ಸಲ್ಲಿಸಬೇಕು?
ಎಸ್ಎಸ್ಎಲ್ಸಿ ಉತ್ತೀರ್ಣ ಅಥವಾ ಅನುತೀರ್ಣ ಹೊಂದಿದ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೋಟೋಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವವರು ksrtcjobs.karnataka.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಬಹುದು. ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಕೂಡ ಲಭ್ಯವಾಗಲಿದೆ.



















