ದಾವಣಗೆರೆ: ಇಂದಿನಿಂದ ಸರ್ಕಾರದಿಂದ ಜಾತಿಗಣತಿ ಸಮೀಕ್ಷೆ ಹಿನ್ನೆಲೆ ಪ್ರತಿ ಊರಿಗೆ ಹೋಗಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಜಾಗೃತಿ ಮೂಡಿಸುವ ಅಭಿಯಾವನ್ನು ಕೈಗೊಂಡಿದ್ದಾರೆ. ಇಂದು ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಬರೆಸಬೇಕು ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸಬೇಕು. ಕೋಡ್ A-0868 ಬರೆಸಲು ಹೇಳಿದ್ದೇನೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಹಿಂದೂ ಧರ್ಮ ಬರೆಸುವ ಕುರಿತು ಗೊಂದಲ ವಿಚಾರವಾಗಿ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ಈಗಾಗಲೇ ಆ ಬಗ್ಗೆ ಹೇಳಿದ್ದು ಪುನರುಚ್ಚರಿಸುವ ಅವಶ್ಯಕತೆ ಇಲ್ಲ. ಈಗ ಎಲ್ಲಾ ಶ್ರೀಗಳು ನಾವೆಲ್ಲ ಹಿಂದೂಗಳು ಎಂದು ಹೇಳಿದ್ದಾರೆ. ವೀರಶೈವ ಲಿಂಗಾಯತರು ಸಾಮಾಜಿಕವಾಗಿ ಒಂದು, ಧರ್ಮದ ಕಾಲಂನಲ್ಲಿ ಹಿಂದೂನೇ ಬರೆಸಬೇಕು ನಮ್ಮ ಸಮುದಾಯದಲ್ಲಿ ಯಾವುದೇ ಗೊಂದಲ ಇಲ್ಲ. ಇದು ಕೇವಲ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಲ್ಲ, ರಾಜಕೀಯವೂ ಇದೆ. ನಮ್ಮ ಸಂಖ್ಯೆ ಕಡಿಮೆ ಆದರೆ ನಮಗೆ ಸಿಗುವ ಮೀಸಲಾತಿ ಕಡಿಮೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅವೈಜ್ಞಾನಿಕ ಸಮೀಕ್ಷೆ ಆಗಿತ್ತು. ಈಗ ಸಮೀಕ್ಷೆಯನ್ನು ಗಮನಿಸುತ್ತೇವೆ ಸರಿಯಾಗದಿದ್ದರೆ ತಿರಸ್ಕಾರ ಮಾಡುತ್ತೇವೆ. ವಾರಕ್ಕೊಮ್ಮೆ ಹೊಸ ಕೈಪಿಡಿ ಬರುತ್ತಿದ್ದು, ಅವರಿಗೆ ತಿಳಿದ ಹಾಗೇ ಮಾಡುತ್ತಿದ್ದಾರೆ. ಅವರ ಪಕ್ಷದ ಸಚಿವರಿಗೆ ಹಲವು ಗೊಂದಲಗಳು ಇವೆ. ಈ ಸಮೀಕ್ಷೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರಕ್ಕಿಂತ ಮೊದಲು ನಾವು ಮಾಡಬೇಕು ಎಂಬ ತರಾತುರಿಯಲ್ಲಿ ರಾಜ್ಯ ಸರ್ಕಾರ ಈ ಸಮೀಕ್ಷೆಗೆ ಮುಂದಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



















