ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನವೇ ಶೇ.96.40ರಷ್ಟು ಗುರಿ ಸಾಧಿಸಲಾಗಿದ್ದು, 5 ವರ್ಷದೊಳಗಿನ ಬಹುತೇಕ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 11,47,872 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ನಗರದಾದ್ಯಂತ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರಗಳು, ಸಂಚಾರಿ ತಂಡಗಳು ಹಾಗೂ ಟ್ರಾನ್ಸಿಟ್ ಪಾಯಿಂಟ್‌ಗಳ ಮೂಲಕ ಮಕ್ಕಳಿಗೆ ಪೋಲಿಯೊ ಹನಿಗಳನ್ನು ಹಾಕಲಾಯಿತು. ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿ ನಡೆಯಿತು.

ಇನ್ನೂ ಲಸಿಕೆ ಪಡೆಯದ ಮಕ್ಕಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರ ಪಾಲಿಕೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜುಲೈ 1ರವರೆಗೆ ಲಸಿಕೆ ನೀಡಲಾಗುತ್ತದೆ. ಜೊತೆಗೆ, ಲಸಿಕಾ ಕೇಂದ್ರಗಳಿಗೆ ಭೇಟಿ ನೀಡದ ಮಕ್ಕಳನ್ನು ಗುರುತಿಸಲು ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ.
ನಗರದ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ನಿಗದಿತ ಅವಧಿಯಲ್ಲಿ ಶೇ.100ರಷ್ಟು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯ ಸಿಬ್ಬಂದಿಯೊಂದಿಗೆ ಸಹಕರಿಸಿ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸುವಂತೆ ನಗರ ಪಾಲಿಕೆಗಳ ಆಯುಕ್ತರು ಮನವಿ ಮಾಡಿದ್ದಾರೆ.
ನಗರ ಪಾಲಿಕೆವಾರು ಪ್ರಗತಿ:
ಕೇಂದ್ರ ನಗರ ಪಾಲಿಕೆ – 95.45%
ಪೂರ್ವ ನಗರ ಪಾಲಿಕೆ – 99.48%
ಪಶ್ಚಿಮ ನಗರ ಪಾಲಿಕೆ – 94.34%
ಉತ್ತರ ನಗರ ಪಾಲಿಕೆ – 98.22%
ದಕ್ಷಿಣ ನಗರ ಪಾಲಿಕೆ – 95.13%
ಒಟ್ಟಾರೆ ಜಿಬಿಎ ವ್ಯಾಪ್ತಿಯಲ್ಲಿ ಮೊದಲ ದಿನವೇ ಶೇ.96.40ರಷ್ಟು ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಮೂಲಕ ಅಭಿಯಾನ ಯಶಸ್ವಿಯಾಗಿ ಆರಂಭವಾಗಿದೆ.
ಇದನ್ನೂ ಓದಿ : 29 ವರ್ಷಗಳ ನಿಸ್ವಾರ್ಥ ಸೇವೆ.. ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ದೈಹಿಕ ಶಿಕ್ಷಕ ಜೀವನ್ ಕುಮಾರ್ ಶೆಟ್ಟಿಗೆ ಅದ್ದೂರಿ ಬೀಳ್ಕೊಡುಗೆ!


















