ವಾಷಿಂಗ್ಟನ್ : ಶನಿವಾರ ರಾತ್ರಿ ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರ ವಾರ್ಷಿಕ ಔತಣಕೂಟದಲ್ಲಿ ಹಠಾತ್ ಗುಂಡಿನ ದಾಳಿ ನಡೆದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್ ಹಾಗೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಈ ಆಘಾತಕಾರಿ ಘಟನೆಯಲ್ಲಿ ಟ್ರಂಪ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಕೂಡಲೇ ಬಂಧಿಸುವಲ್ಲಿ ಅಮೆರಿಕದ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ವಾಷಿಂಗ್ಟನ್‌ನ ಪ್ರಸಿದ್ಧ ಹಿಲ್ಟನ್ ಹೋಟೆಲ್‌ನಲ್ಲಿ ಈ ಅದ್ದೂರಿ ಔತಣಕೂಟವನ್ನು ಆಯೋಜಿಸಲಾಗಿತ್ತು. ಸುಮಾರು 2,600ಕ್ಕೂ ಹೆಚ್ಚು ಗಣ್ಯರು ಹಾಗೂ ಪತ್ರಕರ್ತರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ಜಾದೂಗಾರ ಓಜ್ ಪರ್ಲ್ಮನ್ ತಮ್ಮ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಏಕಾಏಕಿ ಐದರಿಂದ ಎಂಟು ಬಾರಿ ಗುಂಡು ಹಾರಿದ ಸದ್ದು ಕೇಳಿಸಿದೆ. ಆರಂಭದಲ್ಲಿ ಕೆಲವರು ತಟ್ಟೆಗಳು ಬಿದ್ದ ಸದ್ದು ಎಂದು ಭಾವಿಸಿದ್ದರು.
ಆದರೆ, ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದ ‘ಸೀಕ್ರೆಟ್ ಸರ್ವೀಸ್’ ಭದ್ರತಾ ಪಡೆಗಳು, ಮಿಂಚಿನ ವೇಗದಲ್ಲಿ ವೇದಿಕೆಯತ್ತ ಧಾವಿಸಿ ಟ್ರಂಪ್ ಹಾಗೂ ಮೆಲಾನಿಯಾ ಅವರನ್ನು ಸುತ್ತುವರಿದರು. ಗುಂಡಿನ ಸದ್ದು ಕೇಳುತ್ತಿದ್ದಂತೆ ಟ್ರಂಪ್ ದಂಪತಿ ವೇದಿಕೆಯ ಕೆಳಗೆ ಅಡಗಿ ಕುಳಿತರು. ನಂತರ ಭದ್ರತಾ ಸಿಬ್ಬಂದಿ ಅವರನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಸಭಾಂಗಣದಲ್ಲಿದ್ದ ಇತರ ಗಣ್ಯರು ಹಾಗೂ ಪತ್ರಕರ್ತರು ಪ್ರಾಣರಕ್ಷಣೆಗಾಗಿ ಟೇಬಲ್‌ಗಳ ಕೆಳಗೆ ಅಡಗಿಕೊಂಡು ಆತಂಕದ ಕ್ಷಣಗಳನ್ನು ಕಳೆದರು.
ಶಸ್ತ್ರಸಜ್ಜಿತ ದಾಳಿಕೋರನ ಸೆರೆ
ದಾಳಿ ನಡೆಸಿದ ಯುವಕನನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್ ಮೂಲದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾಗಿದೆ. ಈತ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹಾಗೂ ಶಾರ್ಟ್-ಗನ್ ಮೂಲಕ ದಾಳಿಗೆ ಯತ್ನಿಸಿದ್ದ ಎನ್ನಲಾಗಿದೆ. ಭದ್ರತಾ ಕೋಟೆಯನ್ನು ಭೇದಿಸಿ ಒಳನುಗ್ಗಲು ಯತ್ನಿಸಿದ ಈತನನ್ನು ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಹಿಡಿದು ನೆಲಕ್ಕೆ ಕೆಡವಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರಿಗೆ ಗುಂಡು ತಗುಲಿದೆಯಾದರೂ, ಅವರು ಬುಲೆಟ್-ಪ್ರೂಫ್ ಜಾಕೆಟ್ ಧರಿಸಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಕಾರ್ಯಕ್ರಮ ಮುಂದುವರಿಯಲಿ’: ಟ್ರಂಪ್ ಪ್ರತಿಕ್ರಿಯೆ
ಘಟನೆಯಿಂದ ಸುರಕ್ಷಿತವಾಗಿ ಪಾರಾದ ಬಳಿಕ ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಸೀಕ್ರೆಟ್ ಸರ್ವೀಸ್ ಪಡೆಗಳ ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ವಾಷಿಂಗ್ಟನ್ ಡಿಸಿಯಲ್ಲಿ ಇದೊಂದು ಭಯಾನಕ ಸಂಜೆ. ಸೀಕ್ರೆಟ್ ಸರ್ವೀಸ್ ಹಾಗೂ ಕಾನೂನು ಜಾರಿ ಸಂಸ್ಥೆಗಳು ಅತ್ಯಂತ ತ್ವರಿತವಾಗಿ ಮತ್ತು ದಿಟ್ಟತನದಿಂದ ಕಾರ್ಯನಿರ್ವಹಿಸಿವೆ,” ಎಂದಿದ್ದಾರೆ. “ದಾಳಿಕೋರನೊಬ್ಬ ನನ್ನನ್ನು ಹತ್ಯೆ ಮಾಡಲು ಯತ್ನಿಸಿದ, ಆತ ಓರ್ವ ಮಾನಸಿಕ ರೋಗಿ. ಆತನನ್ನು ಬಂಧಿಸಲಾಗಿದೆ. ‘ಕಾರ್ಯಕ್ರಮ ಮುಂದುವರಿಯಲಿ’ ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ,” ಎಂದು ಟ್ರಂಪ್ ಹೇಳಿದ್ದು, ಭದ್ರತಾ ಸಿಬ್ಬಂದಿ ಶೂಟರ್‌ನನ್ನು ನೆಲಕ್ಕೆ ಕೆಡವಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಅಕ್ರಮ ಗೋ ಸಾಗಾಟ ವಾಹನ ತಡೆದು ಗೋವುಗಳನ್ನು ರಕ್ಷಿಸಿದ ಶಾಸಕ ಶರಣು ಸಲಗರ!



















