ಲಕ್ನೋ : ಉದ್ಘಾಟನೆಯಾದ ಕೇವಲ ಮೂರು ವಾರಗಳಲ್ಲೇ ಉತ್ತರ ಪ್ರದೇಶದ ನೂತನ ಕಾನ್ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇಯ ಹಲವು ಭಾಗಗಳು ಕುಸಿದುಬಿದ್ದಿದ್ದು, ರಸ್ತೆಯನ್ನು ಮತ್ತೆ ಅಗೆದು ನಿರ್ಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 4,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಹೆದ್ದಾರಿಯನ್ನು ಜುಲೈ 13 ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ, ಕೇವಲ 13 ದಿನಗಳಲ್ಲಿ ರಸ್ತೆ ಕುಸಿಯಲು ಆರಂಭವಾಗಿದ್ದು, ಸದ್ಯ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹವನ್ನು ಸಂಪೂರ್ಣವಾಗಿ ಅಮಾನತುಗೊಳಿಸಿದೆ.

ಮಳೆಯ ನೀರು ರಸ್ತೆಯ ಒಳಭಾಗಕ್ಕೆ ಇಳಿದು ತಳಭಾಗದ ಮಣ್ಣು ಸಡಿಲಗೊಂಡಿದ್ದರಿಂದ ರಸ್ತೆ ಕುಸಿತ ಕಂಡಿದೆ ಎಂದು ಪ್ರಾಧಿಕಾರ ಅಂದಾಜಿಸಿದೆ. ಸುಮಾರು 300 ಮೀಟರ್‌ಗೂ ಹೆಚ್ಚಿನ ಉದ್ದದ ರಸ್ತೆಯನ್ನು ಜೆಸಿಬಿ ಯಂತ್ರಗಳ ಮೂಲಕ ಸಂಪೂರ್ಣವಾಗಿ ಅಗೆದು ಮರುನಿರ್ಮಾಣ ಮಾಡಲಾಗುತ್ತಿದೆ.
ರಸ್ತೆ ದುರಸ್ತಿಯಿಂದಾಗಿ ಒಂದು ಬದಿಯ ಸಂಚಾರವನ್ನು ಬಂದ್ ಮಾಡಲಾಗಿದ್ದು, ಒಂದೇ ಪಥದಲ್ಲಿ ಎರಡೂ ಕಡೆಯ ವಾಹನಗಳು ಚಲಿಸುವಂತಾಗಿದೆ. ಉನ್ನಾವೋ ಪ್ರವೇಶ ದ್ವಾರದ ಬಳಿ ವಾಹನ ಸವಾರರು ರಾಂಗ್ ರೂಟ್‌ನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಟೋಲ್ ಪಾವತಿಸಿದ ಮೇಲೆಯೂ ಸವಾರರು ಪರದಾಡುವಂತಾಗಿದೆ. ರಸ್ತೆಯ ಸಮಸ್ಯೆಯನ್ನು ಅಧ್ಯಯನ ಮಾಡಲು ಐಐಟಿ ಖರಗ್‌ಪುರ ಸಂಸ್ಥೆಯ ತಜ್ಞರ ತಂಡವನ್ನು ನಿಯೋಜಿಸಲಾಗಿದೆ.
ಗುತ್ತಿಗೆದಾರ ಕಂಪನಿಗೆ ಭಾರೀ ದಂಡ
ರಸ್ತೆಯ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಯೋಜನೆಯ ಗುತ್ತಿಗೆ ವಹಿಸಿಕೊಂಡಿದ್ದ ‘ಪಿಎನ್‌ಸಿ ಇನ್‌ಫ್ರಾಟೆಕ್’ (PNC Infratech) ಕಂಪನಿಗೆ ಎನ್‌ಎಚ್‌ಎಐ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂಸ್ಥೆಯನ್ನು ‘ಕಳಪೆ ನಿರ್ವಹಣೆ ಸಂಸ್ಥೆ’ (Non-performer) ಎಂದು ಘೋಷಿಸಲು ನೋಟಿಸ್ ನೀಡಲಾಗಿದ್ದು, ಮುಂದಿನ ಮೂರು ವರ್ಷಗಳ ಕಾಲ ಸರ್ಕಾರಿ ಯೋಜನೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಲು ಪ್ರಕ್ರಿಯೆ ಆರಂಭಿಸಲಾಗಿದೆ. ಅಲ್ಲದೆ, ರಸ್ತೆ ದುರಸ್ತಿಗೆ ತಗುಲುವ ಅಂದಾಜು 3 ಕೋಟಿ ರೂಪಾಯಿ ವೆಚ್ಚ ಹಾಗೂ ಟೋಲ್ ಸಂಗ್ರಹಣೆಯಾಗದೆ ಉಂಟಾಗುವ ನಷ್ಟವನ್ನು ಸಂಪೂರ್ಣವಾಗಿ ಗುತ್ತಿಗೆದಾರ ಕಂಪನಿಯಿಂದಲೇ ವಸೂಲಿ ಮಾಡಲು ತೀರ್ಮಾನಿಸಲಾಗಿದೆ.
ಅಧಿಕಾರಿಗಳ ಅಮಾನತು
ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ವಿರುದ್ಧವೂ ಕೇಂದ್ರ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ಯೋಜನಾ ವ್ಯವಸ್ಥಾಪಕ ವಿವೇಕ್ ಕುಮಾರ್ ಗುಪ್ತಾ, ತಾಂತ್ರಿಕ ಇಂಜಿನಿಯರ್‌ಗಳಾದ ಸುರೇಂದ್ರ ಕುಮಾರ್ ಮತ್ತು ಯತೇಂದ್ರ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಸರ್ಕಾರಿ ಯೋಜನೆಗಳಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿದೆ. ಪ್ರಸ್ತುತ ಯೋಜನಾ ನಿರ್ದೇಶಕ ನಕುಲ್ ಪ್ರಕಾಶ್ ವರ್ಮಾ ಮತ್ತು ಮಾಜಿ ಯೋಜನಾ ನಿರ್ದೇಶಕ ಸೌರಭ್ ಚೌರಾಸಿಯಾ ಅವರಿಗೆ ಕರ್ತವ್ಯ ಲೋಪದಡಿ ಚಾರ್ಜ್‌ಶೀಟ್ ನೀಡಲಾಗಿದೆ. ದುರಸ್ತಿ ಕಾರ್ಯಗಳು ಸಂಪೂರ್ಣ ಮುಗಿಯುವವರೆಗೆ ಸಾರ್ವಜನಿಕರಿಂದ ಯಾವುದೇ ಟೋಲ್ ವಸೂಲಿ ಮಾಡುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಅಲ್ಜಾರಿ ಜೋಸೆಫ್ ವಿವಾದ : ಕೋಚ್ ಡ್ಯಾರೆನ್ ಸಾಮಿ ವಿರುದ್ಧ ಹರಿಹಾಯ್ದ ದಿಗ್ಗಜ ವಿವಿಯನ್ ರಿಚರ್ಡ್ಸ್!


















