ಬೆಂಗಳೂರು : ದೇಶದ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸುವ ಸೈನಿಕರಿಗೆ ಕೇಂದ್ರ ಸರ್ಕಾರವು ದೊಡ್ಡ ಸೌಲಭ್ಯವನ್ನು ಘೋಷಿಸಿದೆ. ಸಶಸ್ತ್ರ ಪಡೆಗಳ ಶೌರ್ಯ ಪ್ರಶಸ್ತಿ ಪುರಸ್ಕೃತರು ನವೆಂಬರ್ 1ರಿಂದ ರೈಲುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಣೆ ಮಾಡಿದೆ. ಇದರೊಂದಿಗೆ ಪ್ರಶಸ್ತಿ ಪುರಸ್ಕೃತ ವೀರ ಯೋಧರು ಜೀವಿತಾವಧಿವರೆಗೆ ದೇಶದ ಯಾವುದೇ ಭಾಗದಲ್ಲಿ ರೈಲುಗಳ ಮೂಲಕ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಶೌರ್ಯಕ್ಕಾಗಿ ನೀಡುವ ಸೇನಾ ಪದಕ, ನೌಕಾ ಸೇನಾ ಪದಕ ಮತ್ತು ವಾಯು ಸೇನಾ ಪದಕ ಪಡೆದ ವೀರ ಯೋಧರಿಗೆ ಭಾರತೀಯ ರೈಲ್ವೆಯಲ್ಲಿ ಆಜೀವ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ. ಈ ಹೊಸ ನಿಯಮವು ಮುಂಬರುವ ನವೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಸೌಲಭ್ಯವು ಕೇವಲ ಪ್ರಶಸ್ತಿ ಪುರಸ್ಕೃತ ಸೈನಿಕರಿಗೆ ಮಾತ್ರವಲ್ಲದೆ, ಅವರ ಕುಟುಂಬದವರಿಗೂ ಅನ್ವಯಿಸಲಿದೆ.
ಅರ್ಹ ಫಲಾನುಭವಿಗಳು ಭಾರತೀಯ ರೈಲ್ವೆಯ ಫಸ್ಟ್ ಕ್ಲಾಸ್, ಸೆಕೆಂಡ್ ಎಸಿ ಮತ್ತು ಎಸಿ ಚೇರ್ ಕಾರ್ ಬೋಗಿಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಜತೆಗೆ ಅವರೊಂದಿಗೆ ಪ್ರಯಾಣಿಸುವ ಒಬ್ಬ ಸಹಚರರಿಗೂ ಈ ವಿನಾಯಿತಿ ಸಿಗಲಿದೆ. ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರಿಗೆ ಕೇಂದ್ರ ಸರ್ಕಾರವು ಹೊಸ ಸೌಲಭ್ಯ ಘೋಷಣೆ ಮಾಡಿರುವುದು ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ಸಂಪೂರ್ಣ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಸರ್ಕಾರವು ಸಂಪೂರ್ಣ ಡಿಜಿಟಲ್ ಮತ್ತು ಪೇಪರ್ ಲೆಸ್ (ಕಾಗದರಹಿತ) ವ್ಯವಸ್ಥೆಯನ್ನು ರೂಪಿಸಿದೆ. ಇದರಡಿ ಅರ್ಹ ಫಲಾನುಭವಿಗಳು ‘ಇಂಡಿಯನ್ ರೈಲ್ವೆ ಕನ್ಸೆಷನ್ ಕಾರ್ಡ್ ಪೋರ್ಟಲ್’ (IRCCP) ಮೂಲಕ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪರಿಶೀಲನೆಯ ನಂತರ ಡಿಜಿಟಲ್ ಇ-ಪಾಸ್ ನೀಡಲಾಗುತ್ತದೆ. ಈ ಪಾಸ್ ಬಳಸಿ ನವೆಂಬರ್ 1 ರಿಂದ ಐಆರ್ ಸಿಟಿಸಿ (IRCTC) ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಉಚಿತವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರದ KSRLPS ಸಂಸ್ಥೆಯಲ್ಲಿ 57 ಹುದ್ದೆಗಳ ನೇಮಕ : 2 ಜಿಲ್ಲೆಯವರಿಗೆ ಶುಭ ಸಮಾಚಾರ



















