ಬೀದರ್ : ಖಚಿತ ಮಾಹಿತಿ ಮೇರೆಗೆ ಬೀದರ್ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ಹಾವನ್ನು ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜೀವಂತ ರೆಡ್ ಸ್ಯಾಂಡ್ ಬೋವಾ ಹಾವನ್ನು ವಶಕ್ಕೆ ಪಡೆಯಲಾಗಿದೆ.,
ಆಂಧ್ರ ಪ್ರದೇಶ ನೋಂದಣಿ ಹೊಂದಿದ್ದ ಬಿಳಿ ಬಣ್ಣದ ಕಾರಿನಲ್ಲಿ ಜೀವಂತ ರೆಡ್ ಸ್ಯಾಂಡ್ ಬೋವಾ ಹಾವನ್ನು ರಹಸ್ಯವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಹಾವು ಪತ್ತೆಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ರೆಡ್ ಸ್ಯಾಂಡ್ ಬೋವಾ ಹಾವು ಸುಮಾರು 5.34 ಕೆಜಿ ತೂಕ ಹೊಂದಿದೆ ಎಂದು ತಿಳಿದುಬಂದಿದೆ. ಅಪರೂಪದ ಈ ಜಾತಿಯ ಹಾವಿಗೆ ಅಕ್ರಮ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಇರುವ ಹಿನ್ನೆಲೆಯಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಹಾವನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ
ಈ ಘಟನೆ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತರಿಂದ ಹಾವು ಸಾಗಾಟದ ಜಾಲದ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜ್ಯಾಂತರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಳ್ಳಸಾಗಣೆ ಜಾಲದ ಸುಳಿವು ಸಿಕ್ಕಿರುವ ಸಾಧ್ಯತೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಬೀದರ್ ವಿಭಾಗದ DFO ಆಶಿಶ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ : ಬೈಕ್‌ನಲ್ಲಿದ್ದ 1 ಲಕ್ಷ ಹಣ ದೋಚಿ ಪರಾರಿಯಾಗುವಷ್ಟರಲ್ಲಿ ಸಿಕ್ಕಿಬಿದ್ದ ಖದೀಮರು!



















