ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಫ್ಲವರ್ ಶೋಗೆ ಭರ್ಜರಿ ಸಿದ್ಧತೆ ನಡೆದಿದ್ದು, ನವೆಂಬರ್ 25 ರಿಂದ ಡಿಸೆಂಬರ್ 7 ರವರೆಗೆ ಒಟ್ಟು 13 ದಿನಗಳ ಕಾಲ ಈ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಥೀಮ್‌ನಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಇಲ್ಲಿ ಬಗೆಬಗೆಯ ಹೂವುಗಳು ಮತ್ತು ಆಕರ್ಷಕ ಕಲಾಕೃತಿಗಳು ಅನಾವರಣಗೊಳ್ಳಲಿವೆ.
ಪೆಟೂನಿಯಾ, ಟೊರೇನಿಯಾ, ಸಾಲ್ವಿಯಾ ಸೇರಿದಂತೆ ಹಲವು ಬಗೆಯ ಹೂಗಳನ್ನು ಇದರಲ್ಲಿ ಬಳಸಲಾಗಿದ್ದು, ಅಲ್ಲದೆ ಮಾರಿಗೋಲ್ಡ್, ಕ್ರಸಾಂಥಿಮಮ್ ಮತ್ತು ಜರ್ಬೆರಾ ಹೂಗಳಲ್ಲಿ ಪುಷ್ಪಾಕೃತಿಗಳನ್ನು ನಿರ್ಮಿಸಲಾಗಿದೆ. ಪ್ರದರ್ಶನದಲ್ಲಿ ಆಹಾರ ಮಳಿಗೆಗಳು, ನರ್ಸರಿಗಳು ಹಾಗೂ ವಿಶೇಷ ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 50 ರೂಪಾಯಿ ಮತ್ತು ರಜಾ ದಿನಗಳಲ್ಲಿ 80 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಶಾಲಾ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ ಉಚಿತ ಪ್ರವೇಶ ನೀಡಲಾಗಿದೆ.


















