ಬೆಂಗಳೂರು : ಸದಾ ಟ್ರಾಫಿಕ್ ಜಾಮ್‌ನಿಂದಲೇ ಪ್ರಸಿದ್ಧಿಯಾದ ಗೊರಗುಂಟೆಪಾಳ್ಯ–ಪೀಣ್ಯ–ಜಾಲಹಳ್ಳಿ ಕ್ರಾಸ್ ಪ್ರದೇಶದಲ್ಲಿ ಮುಂದಿನ ಮೂರು ದಿನಗಳು ವಾಹನ ಸವಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಕಾರಣ, ಪೀಣ್ಯ ಫ್ಲೈಓವರ್ ಇಂದಿನಿಂದ ಮೇ 8ರವರೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ-4ರ ಮೇಲಿರುವ ಈ ಪ್ರಮುಖ ಫ್ಲೈಓವರ್‌ನಲ್ಲಿ 1,422 ಹಳೆಯ ಕೇಬಲ್‌ಗಳನ್ನು ಬದಲಾಯಿಸಿರುವ ಹಿನ್ನೆಲೆಯಲ್ಲಿ ಅಂತಿಮ ಲೋಡ್ ಟೆಸ್ಟಿಂಗ್ ಮತ್ತು ಸುರಕ್ಷತಾ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರಣಕ್ಕೆ ಮೇ 5ರ ಬೆಳಿಗ್ಗೆ 5 ಗಂಟೆಯಿಂದ ಮೇ 8ರ ಬೆಳಿಗ್ಗೆ 11 ಗಂಟೆಯವರೆಗೆ ಅಪ್ ರ್ಯಾಂಪ್ ಹಾಗೂ ಡೌನ್ ರ್ಯಾಂಪ್ ಎರಡೂ ಭಾಗಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪೀಣ್ಯ ಫ್ಲೈಓವರ್ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಮುಂಬೈ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ಇದರ ಬಂದ್ ಪರಿಣಾಮವಾಗಿ ಸರ್ವೀಸ್ ರಸ್ತೆಗಳ ಮೇಲೆ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.
ಪರ್ಯಾಯ ಮಾರ್ಗಗಳು:
- ನೆಲಮಂಗಲ → ಬೆಂಗಳೂರು ಕಡೆಗೆ: ಕೆನ್ನಮೆಟಲ್ ಫ್ಯಾಕ್ಟರಿ ಸಮೀಪ ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಹಾಗೂ ಸರ್ವಿಸ್ ರಸ್ತೆ → 8ನೇ ಮೈಲಿ → ದಾಸರಹಳ್ಳಿ → ಜಾಲಹಳ್ಳಿ ಕ್ರಾಸ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್‌ಆರ್‌ಎಸ್ ಜಂಕ್ಷನ್ → ಗೊರಗುಂಟೆಪಾಳ್ಯ.
- ಸಿಎಂಟಿಐ → ನೆಲಮಂಗಲ ಕಡೆಗೆ: ಫ್ಲೈಓವರ್ ಕೆಳಭಾಗದ ಎನ್‌ಎಚ್-4 ಹಾಗೂ ಸರ್ವಿಸ್ ರಸ್ತೆ → ಎಸ್‌ಆರ್‌ಎಸ್ ಜಂಕ್ಷನ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಜಾಲಹಳ್ಳಿ ಕ್ರಾಸ್ → ದಾಸರಹಳ್ಳಿ → 8ನೇ ಮೈಲಿ → ಪಾರ್ಲೆ-ಜಿ ಟೋಲ್ ಮಾರ್ಗ.
ಇದೀಗವೂ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯವಾಗಿದ್ದು, ಫ್ಲೈಓವರ್ ಬಂದ್ ಹಿನ್ನೆಲೆ ಮುಂದಿನ ಮೂರು ದಿನ ವಾಹನ ಸವಾರರು ಹೆಚ್ಚಿನ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಸೇತುವೆಯ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ವಿಡಿಯೋ ಕಾಲ್‌ನಲ್ಲಿ ಮಗು ತೋರಿಸದಿದ್ದಕ್ಕೆ ಅತ್ತೆಗೆ ಚಾಕು ಇರಿದ ಅಳಿಯ


















