ಕಠ್ಮಂಡು : ನೆರೆ ರಾಷ್ಟ್ರ ನೇಪಾಳದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಳೆದ ವರ್ಷದ ಜೆನ್ ಝೀ ಕ್ರಾಂತಿಯ ಬಳಿಕ ಇದೇ ಮೊದಲ ಬಾರಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಹಿರಿಯ ರಾಜಕಾರಣಿ ಮತ್ತು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.
ಒಲಿ ಅವರ ಭದ್ರಕೋಟೆಯಾದ ಝಾಪಾ ಕ್ಷೇತ್ರದಲ್ಲಿ, ರಾಪರ್‌ನಿಂದ ರಾಜಕಾರಣಿಯಾಗಿ ಬದಲಾಗಿರುವ 35 ವರ್ಷದ ಯುವ ನಾಯಕ ಬಲೇಂದ್ರ ಶಾ (ಬಲೇನ್) ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 74 ವರ್ಷದ ಅನುಭವಿ ರಾಜಕಾರಣಿ ಒಲಿ ಅವರ ವಿರುದ್ಧ ಯುವ ಮತದಾರರು ಬಲೇನ್ ಪರವಾಗಿ ನಿಂತಿರುವುದು ಸ್ಪಷ್ಟವಾಗಿ ಗೋಚರಿಸಿದೆ.
‘ಜೆನ್ ಝೀ’ ಕ್ರಾಂತಿಗೆ ಬದಲಾದ ರಾಜಕೀಯ
ಕಳೆದ ಸೆಪ್ಟೆಂಬರ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ನೇಪಾಳದ ಯುವ ಸಮೂಹ (Gen Z) ನಡೆಸಿದ ಉಗ್ರ ಪ್ರತಿಭಟನೆಗಳು ಒಲಿ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆ ಪ್ರತಿಭಟನೆಯ ಅಘೋಷಿತ ನಾಯಕನಂತಿದ್ದ ಬಲೇಂದ್ರ ಶಾ ಅವರು ಈ ಬಾರಿ ರಬಿ ಲಮಿಚಾನೆ ನೇತೃತ್ವದ ರಾಷ್ಟ್ರಿಯ ಸ್ವತಂತ್ರ ಪಕ್ಷದ (RSP) ಮೂಲಕ ಕಣಕ್ಕಿಳಿದಿದ್ದಾರೆ. ಕಠ್ಮಂಡುವಿನ ಮಾಜಿ ಮೇಯರ್ ಆಗಿ ಜನಪ್ರಿಯತೆ ಗಳಿಸಿದ್ದ ಬಲೇನ್, ಚುನಾವಣಾ ಪ್ರಚಾರದ ಸಮಯದಲ್ಲಿ ಬೃಹತ್ ಯುವ ಸಮೂಹವನ್ನು ಆಕರ್ಷಿಸಿದ್ದರು. ಪ್ರಸ್ತುತ ಇವರ ಪಕ್ಷವು ಒಂದು ಸ್ಥಾನ ಗೆದ್ದಿದ್ದು, 30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಾಂಪ್ರದಾಯಿಕ ಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳಿಗೆ ನಡುಕ ಹುಟ್ಟಿಸಿದೆ.
ತೂಗುಯ್ಯಾಲೆಯಲ್ಲಿ ಹಳಬರ ಭವಿಷ್ಯ
ಒಂದೆಡೆ ಬಲೇಂದ್ರ ಶಾ ಅಲೆ ಎದ್ದಿದ್ದರೆ, ಮತ್ತೊಂದೆಡೆ ಹಳೆಯ ರಾಜಕೀಯ ಶಕ್ತಿಗಳಾದ ಗಗನ್ ಥಾಪಾ ಅವರ ನೇಪಾಳಿ ಕಾಂಗ್ರೆಸ್ ಮತ್ತು ಪುಷ್ಪ ಕಮಲ್ ದಹಲ್ ಅವರ ಕಮ್ಯುನಿಸ್ಟ್ ಪಕ್ಷಗಳು ಕೆಲವೇ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಮೂರು ಬಾರಿ ಪ್ರಧಾನಿಯಾಗಿದ್ದ ಪುಷ್ಪ ಕಮಲ್ ದಹಲ್ ಅವರು ರುಕುಮ್ ಪೂರ್ವ ಕ್ಷೇತ್ರದಿಂದ ಮುನ್ನಡೆಯಲ್ಲಿದ್ದಾರೆ. ಸುಮಾರು 1.9 ಕೋಟಿ ಮತದಾರರಲ್ಲಿ ಶೇ.60ರಷ್ಟು ಜನರು ಈ ಬಾರಿ ಮತ ಚಲಾಯಿಸಿದ್ದು, 65 ಪಕ್ಷಗಳ 3,400 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 17 ವರ್ಷಗಳಲ್ಲಿ 14 ಸರ್ಕಾರಗಳನ್ನು ಕಂಡಿರುವ ನೇಪಾಳದಲ್ಲಿ ಈ ಬಾರಿಯಾದರೂ ಸ್ಥಿರ ಸರ್ಕಾರ ಬರಲಿದೆಯೇ ಎಂಬ ಕುತೂಹಲ ಮನೆಮಾಡಿದೆ.
ಭಾರತದ ಪ್ರತಿಕ್ರಿಯೆಯೇನು?
ನೇಪಾಳದ ಈ ಮಹತ್ವದ ಬೆಳವಣಿಗೆಯನ್ನು ಭಾರತವು ಅತ್ಯಂತ ಹತ್ತಿರದಿಂದ ಗಮನಿಸುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪ್ರತಿಕ್ರಿಯಿಸಿ, “ಭಾರತವು ಯಾವಾಗಲೂ ನೇಪಾಳದ ಶಾಂತಿ, ಪ್ರಗತಿ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತದೆ” ಎಂದು ತಿಳಿಸಿದ್ದಾರೆ. ನೇಪಾಳದಲ್ಲಿ ಬರಲಿರುವ ಹೊಸ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಮುಂದುವರಿಸಲು ಭಾರತ ಉತ್ಸುಕವಾಗಿದೆ. ಚುನಾವಣಾ ಪ್ರಕ್ರಿಯೆಗೆ ಭಾರತವು ಅಗತ್ಯವಾದ ಮೂಲಸೌಕರ್ಯ ಮತ್ತು ತಾಂತ್ರಿಕ ನೆರವನ್ನು ಸಹ ಒದಗಿಸಿದೆ.
ಇದನ್ನೂ ಓದಿ : ರಾಜ್ಯದ ಹೆಣ್ಣುಮಕ್ಕಳಿಗೆ ಶುಭ ಸಮಾಚಾರ.. ಗೃಹ ಲಕ್ಷ್ಮೀ, ಶಕ್ತಿ ಯೋಜನೆಗೆ 34 ಸಾವಿರ ಕೋಟಿ ರೂ. ಘೋಷಣೆ!



















