ನವದೆಹಲಿ: ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನಿಂದ ದುರ್ಗಾ ದೇವಿಯನ್ನು ಸ್ತುತಿಸುವ ಶ್ಲೋಕಗಳನ್ನು ತೆಗೆದುಹಾಕುವ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಕಾಂಗ್ರೆಸ್ ಪಕ್ಷವು “ಕೋಮುವಾದಿ ಅಜೆಂಡಾಗೆ ನಾಚಿಕೆಯಿಲ್ಲದೆ ಮಣಿದಿತ್ತು” ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.
‘ವಂದೇ ಮಾತರಂ’ ಗೀತೆ ರಚನೆಯಾಗಿ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶಾದ್ಯಂತ “ನಮ್ಮ ವೈಭವಯುತ ‘ವಂದೇ ಮಾತರಂ’ನ ಪೂರ್ಣ ಆವೃತ್ತಿಯ” ಸಾಮೂಹಿಕ ಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಾಮೂಹಿಕ ಗಾಯನಕ್ಕೂ ಮುನ್ನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “1937ರಲ್ಲಿ ‘ವಂದೇ ಮಾತರಂ’ನ ಒಂದು ಭಾಗವನ್ನು ಕತ್ತರಿಸಲಾಯಿತು… ಅದನ್ನು ಹರಿದು ಹಾಕಲಾಯಿತು. ಈ ವಿಭಜನೆಯು ರಾಷ್ಟ್ರದ ವಿಭಜನೆಗೆ ಬೀಜ ಬಿತ್ತಿತು. ಇದು ಏಕೆ ಹೀಗಾಯಿತು ಎಂಬುದನ್ನು ಇಂದಿನ ಪೀಳಿಗೆ ಅರಿಯುವುದು ಮುಖ್ಯ… ವಿಭಜಕ ಚಿಂತನೆಯು ಇಂದಿಗೂ ಒಂದು ಸವಾಲಾಗಿದೆ,” ಎಂದು ಹೇಳಿದರು.
ನೆಹರೂ ಪತ್ರಗಳನ್ನು ಉಲ್ಲೇಖಿಸಿದ ಬಿಜೆಪಿ
ತಮ್ಮ ಎಕ್ಸ್ ಖಾತೆಯಲ್ಲಿ ನೆಹರೂ ಅವರನ್ನು ಟೀಕಿಸಿರುವ ಕೇಶವನ್, 1937ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನೆಹರೂ ಬರೆದ ಪತ್ರಗಳನ್ನು ಹಂಚಿಕೊಂಡಿದ್ದಾರೆ. “ವಂದೇ ಮಾತರಂನ ಹಿನ್ನೆಲೆಯು ಮುಸ್ಲಿಮರನ್ನು ಕೆರಳಿಸುವ ಸಾಧ್ಯತೆಯಿದೆ” ಎಂದು ನೆಹರೂ ಆ ಪತ್ರದಲ್ಲಿ ಹೇಳಿರುವುದಾಗಿ ಕೇಶವನ್ ಉಲ್ಲೇಖಿಸಿದ್ದಾರೆ.
“ವಂದೇ ಮಾತರಂನಲ್ಲಿರುವ ಪದಗಳನ್ನು ದೇವತೆಗೆ ಸಂಬಂಧಿಸಿದ್ದೆಂದು ಪರಿಗಣಿಸುವುದು ಅಸಂಬದ್ಧ ಎಂದು ನೆಹರೂ ದ್ವೇಷಪೂರಿತವಾಗಿ ಬರೆದಿದ್ದಾರೆ,” ಎಂದು ಕೇಶವನ್ ಆರೋಪಿಸಿದ್ದಾರೆ. ಇದಲ್ಲದೆ, “ವಂದೇ ಮಾತರಂ ರಾಷ್ಟ್ರಗೀತೆಯಾಗಿ ಸೂಕ್ತವಲ್ಲ. ಏಕೆಂದರೆ ಅದರಲ್ಲಿ ಹಲವಾರು ಕಠಿಣ ಪದಗಳಿವೆ ಮತ್ತು ಅದು ರಾಷ್ಟ್ರೀಯತೆಯ ಆಧುನಿಕ ಕಲ್ಪನೆಗಳಿಗೆ ಹೊಂದಿಕೆಯಾಗುವುದಿಲ್ಲ,” ಎಂದು ನೆಹರೂ ಅಭಿಪ್ರಾಯಪಟ್ಟಿದ್ದಾಗಿ ಕೇಶವನ್ ಹೇಳಿದ್ದಾರೆ.
ಕಾಂಗ್ರೆಸ್ ತಿರುಗೇಟು
ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತಮ್ಮ ಸಭೆ ಮತ್ತು ರ‍್ಯಾಲಿಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವುದರಿಂದ “ತಪ್ಪಿಸಿಕೊಳ್ಳುತ್ತಿವೆ” ಎಂದು ಆರೋಪಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ಆರ್‌ಎಸ್‌ಎಸ್ ‘ನಮಸ್ತೆ ಸದಾ ವತ್ಸಲೇ’ ಎಂಬ ಪ್ರಾರ್ಥನೆಯನ್ನು ಹಾಡಲು ಆದ್ಯತೆ ನೀಡುತ್ತದೆಯೇ ಹೊರತು ಭಾರತದ ರಾಷ್ಟ್ರಗೀತೆಯನ್ನಲ್ಲ. ಇಂದು ರಾಷ್ಟ್ರೀಯತೆಯ ಸ್ವಯಂಘೋಷಿತ ಪಾಲಕರೆಂದು ಹೇಳಿಕೊಳ್ಳುವ ಆರೆಸ್ಸೆಸ್ ಮತ್ತು ಬಿಜೆಪಿ ಈವರೆಗೆ ಎಂದಿಗೂ ‘ವಂದೇ ಮಾತರಂ’ ಹಾಡಿಲ್ಲ ಎಂಬುದು ತೀರಾ ವ್ಯಂಗ್ಯದ ಸಂಗತಿ,” ಎಂದು ಹೇಳಿದ್ದಾರೆ.
“ನೆಹರೂರಿಂದ ರಾಹುಲ್ ಗಾಂಧಿವರೆಗೆ ಹಿಂದೂ ವಿರೋಧಿ ಮನಸ್ಥಿತಿ”
ಕೇಶವನ್ ಅವರು ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದು, “ನೆಹರೂ ಅವರ ಹಿಂದೂ ವಿರೋಧಿ ಮನಸ್ಥಿತಿಯು ಇತ್ತೀಚೆಗೆ ಪವಿತ್ರ ಛತ್ ಪೂಜೆಯನ್ನು ‘ನಾಟಕ’ ಎಂದು ಜರಿದ ರಾಹುಲ್ ಗಾಂಧಿಯವರಲ್ಲಿ ಪ್ರತಿಧ್ವನಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಮಾರ್ಚ್ 2024ರಲ್ಲಿ ರಾಹುಲ್ ಗಾಂಧಿ ನೀಡಿದ್ದ “ನಾವು ಒಂದು ‘ಶಕ್ತಿ’ಯ ವಿರುದ್ಧ ಹೋರಾಡುತ್ತಿದ್ದೇವೆ” ಎಂಬ ಹೇಳಿಕೆಯನ್ನೂ ಕೇಶವನ್ ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ನಿತೀಶ್-ಲಾಲು ಹಣೆಬರಹ ನಿರ್ಧರಿಸುತ್ತಾ ಬಿಹಾರದ ದಾಖಲೆ ಮತದಾನ? ಇಲ್ಲಿದೆ ರೋಚಕ ಅಂಕಿ-ಅಂಶ


















