ಮೀರತ್ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದ “ನೀಲಿ ಡ್ರಮ್ ಕೊಲೆ” ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಅದೇ ಮೀರತ್‌ನಲ್ಲಿ ಇನ್ಶೂರೆನ್ಸ್ ಹಣ ಹಾಗೂ ಅನೈತಿಕ ಸಂಬಂಧ ಮುಂದುವರಿಸುವ ಹಪಾಹಪಿಗೆ ಬಿದ್ದ ಮಹಿಳೆಯೊಬ್ಬಳು, ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಹಾವಿನ ಕಡಿತದಿಂದ ಸಾವು ಸಂಭವಿಸಿದೆ ಎಂದು ನಂಬಿಸಲು ಈ ಇಬ್ಬರು ಆರೋಪಿಗಳು ವಿಷಕಾರಿ ಹಾವನ್ನು ಬಳಸಿ ಈ ಕೃತ್ಯ ಎಸಗಿದ್ದು, ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಸಂಚುಗೈದು ಕೊಲೆ
ಹಸ್ತಿನಾಪುರದಲ್ಲಿ ‘ಕೃಷ್ಣ ಕಿಡ್ಸ್ ಪ್ಲೇ ಸ್ಕೂಲ್’ ನಡೆಸುತ್ತಿದ್ದ ಅತುಲ್ ಪನ್ವಾರ್ ಮೃತ ದುರ್ದೈವಿ. ಈತನ ಪತ್ನಿ ದಾಮಿನಿ ಅದೇ ಶಾಲೆಯ ಚಾಲಕ ತುಷಾರ್ ಅಲಿಯಾಸ್ ನಿಕ್ಕಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ವಿಮೆಯ ಹಣಕ್ಕಾಗಿ ಮತ್ತು ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗದಿರಲಿ ಎಂಬ ಕಾರಣಕ್ಕಾಗಿ ಆರಂಭದಲ್ಲಿ ಅತುಲ್‌ನನ್ನು ರಸ್ತೆ ಅಪಘಾತದ ಮೂಲಕ ಕೊಲ್ಲಲು ಇವರಿಬ್ಬರೂ ಸೇರಿ ಸಂಚು ರೂಪಿಸಿದ್ದರು. ಆದರೆ ಆ ಪ್ರಯತ್ನ ವಿಫಲವಾದಾಗ, ಮತ್ತೊಂದು ಪ್ಲಾನ್ ಮಾಡಿದರು. ದಾಮಿನಿ ಶುಕ್ರವಾರ ರಾತ್ರಿ ಪತಿ ಅತುಲ್‌ಗೆ ಕುಡಿಯಲು ನೀಡಿದ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಳು. ಅತುಲ್ ಪ್ರಜ್ಞೆ ತಪ್ಪಿ ನಿದ್ದೆಗೆ ಜಾರಿದ ತಕ್ಷಣ, ಆಕೆಯ ಪ್ರಿಯಕರ ತಂದಿದ್ದ ವಿಷಕಾರಿ ಹಾವನ್ನು ಬೆಡ್ ಮೇಲೆ ಬಿಟ್ಟು ಕಚ್ಚಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಅತುಲ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
20 ಲಕ್ಷ ರೂ. ವಿಮೆ ಹಣಕ್ಕೆ ಸ್ಕೆಚ್
ಮೇಲ್ನೋಟಕ್ಕೆ ಇದು ಹಾವಿನ ಕಡಿತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಆದರೆ ಪೊಲೀಸರಿಗೆ ಇವರ ನಡವಳಿಕೆಯ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ಮೃತನ ಹೆಂಡತಿ ಹಾಗೂ ಶಾಲಾ ವಾಹನ ಚಾಲಕನ ಮೊಬೈಲ್ ಕರೆಗಳ ವಿವರ (CDR) ಮತ್ತು ಇತರ ತಾಂತ್ರಿಕ ಸಾಕ್ಷ್ಯಗಳನ್ನು ಜಾಲಾಡಿದಾಗ ಈ ಭೀಕರ ಕೊಲೆ ರಹಸ್ಯ ಬಯಲಾಗಿದೆ. ಅತುಲ್ ಹೆಸರಿನಲ್ಲಿದ್ದ 20 ಲಕ್ಷ ರೂಪಾಯಿ ಜೀವ ವಿಮೆ ಹಣವನ್ನು ಲೂಟಿ ಮಾಡುವುದು ಹಾಗೂ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಆತನನ್ನು ಮುಗಿಸುವುದೇ ಈ ಕೊಲೆಯ ಮುಖ್ಯ ಉದ್ದೇಶವಾಗಿತ್ತು ಎಂದು ಮೀರತ್ ಎಸ್‌ಎಸ್‌ಪಿ ತಿಳಿಸಿದ್ದಾರೆ.
ಆರೋಪಿಗಳ ಬಂಧನ
ಸದ್ಯ ಪೊಲೀಸರು ದಾಮಿನಿ ಹಾಗೂ ಆಕೆಯ ಪ್ರಿಯಕರ ತುಷಾರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ವಿಚಾರಣೆಯ ವೇಳೆ, ವಿವಾಹಿತನಾಗಿದ್ದ ತುಷಾರ್ ತನ್ನ ಪತ್ನಿಗೂ ವಿಚ್ಛೇದನ ನೀಡಿ ದಾಮಿನಿ ಜೊತೆ ಬಾಳಲು ಸಜ್ಜಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ರಣಭೀಕರ ಮಳೆ, ಭೂಕುಸಿತ.. 10ಕ್ಕೂ ಹೆಚ್ಚು ಸಾವು, ಹಲವರು ನಾಪತ್ತೆ



















