ಲಖಿಸರಾಯ್ (ಬಿಹಾರ): ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ನೀಟ್ ಯುಜಿ 2026’ರ(NEET UG) ಮರುಪರೀಕ್ಷೆಯ ವೇಳೆಯೂ ಅಕ್ರಮ ಎಸಗಲು ಯತ್ನಿಸಿದ ಬೃಹತ್ ಜಾಲವನ್ನು ಬಿಹಾರದ ಜಿಲ್ಲಾಡಳಿತ ಹಾಗೂ ಪೊಲೀಸರು ಪತ್ತೆಹಚ್ಚಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತಾ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದ 9 ನಕಲಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬೇರೆ ಅಭ್ಯರ್ಥಿಗಳ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಈ ಕಿಲಾಡಿಗಳನ್ನು ಪತ್ತೆಹಚ್ಚುವಲ್ಲಿ ಬಿಹಾರದ ಲಖಿಸರಾಯ್ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಕಲಿ ಅಭ್ಯರ್ಥಿಗಳ ಭರ್ಜರಿ ಬೇಟೆ
ಮೂಲಗಳ ಪ್ರಕಾರ, ಲಖಿಸರಾಯ್ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ತಪಾಸಣೆಯ ನಡೆಸುವಾಗ ಈ ವಂಚನೆ ಬಯಲಾಗಿದೆ. ಈ ಪೈಕಿ ಕೆಆರ್‌ಕೆ ಹೈಸ್ಕೂಲ್ ಪರೀಕ್ಷಾ ಕೇಂದ್ರದಿಂದ ಒಬ್ಬ ನಕಲಿ ಅಭ್ಯರ್ಥಿ, ಕೇಂದ್ರೀಯ ವಿದ್ಯಾಲಯದಿಂದ ಏಳು ಮಂದಿ ಹಾಗೂ ಹಸನ್‌ಪುರ ಶಾಲೆಯ ಪರೀಕ್ಷಾ ಕೇಂದ್ರದಿಂದ ಮತ್ತೊಬ್ಬ ನಕಲಿ ಅಭ್ಯರ್ಥಿಯನ್ನು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತ ನಕಲಿ ಅಭ್ಯರ್ಥಿಗಳು ಬಿಹಾರದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಹಣದ ಆಮಿಷಕ್ಕೆ ಒಳಗಾಗಿ ಅಸಲಿ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಕುಳಿತಿದ್ದರು ಎಂದು ತಿಳಿದುಬಂದಿದೆ.
ಅಕ್ರಮ ಜಾಲದ ಬೆನ್ನಟ್ಟಿದ ಪೊಲೀಸ್ ಪಡೆ
ಪರೀಕ್ಷಾ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದ 9 ನಕಲಿ ಅಭ್ಯರ್ಥಿಗಳಲ್ಲದೆ, ಈ ವಂಚನೆ ಜಾಲಕ್ಕೆ ಸಾಥ್ ನೀಡಿದ್ದ ಮತ್ತು ಪರೀಕ್ಷಾ ಅಕ್ರಮಕ್ಕೆ ನೆರವಾಗುತ್ತಿದ್ದ ಇತರ 21 ಜನರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತರನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಪ್ರಭಾಕರ್ ಕುಮಾರ್ ಮತ್ತು ಎಸ್‌ಡಿಪಿಒ ಶಿವಂ ಕುಮಾರ್ ಅವರ ನೇತೃತ್ವದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರು ನೀಡಿದ ಸುಳಿವು ಹಾಗೂ ರಹಸ್ಯ ಮಾಹಿತಿಯ ಆಧಾರದ ಮೇಲೆ, ಈ ಜಾಲದ ಹಿಂದಿರುವ ಪ್ರಮುಖ ಸೂತ್ರಧಾರಿಗಳನ್ನು ಬಂಧಿಸಲು ವಿಶೇಷ ಪೊಲೀಸ್ ತಂಡಗಳು ವಿವಿಧೆಡೆ ಭರ್ಜರಿ ದಾಳಿ ನಡೆಸುತ್ತಿವೆ.
ತನಿಖೆಯ ಉಸ್ತುವಾರಿ ವಹಿಸಿದ ಹಿರಿಯ ಅಧಿಕಾರಿಗಳು
ಲಖಿಸರಾಯ್ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (SP) ಪ್ರೇರಣಾ ಕುಮಾರ್ ಅವರು ಖುದ್ದಾಗಿ ಈ ಇಡೀ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಪರೀಕ್ಷಾ ಅಕ್ರಮದ ಹಿಂದೆ ದೊಡ್ಡ ಮಟ್ಟದ ಸಂಘಟಿತ ನೆಟ್‌ವರ್ಕ್ ಕೆಲಸ ಮಾಡುತ್ತಿರುವ ಶಂಕೆಯಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ತನಿಖೆಗೆ ಧಕ್ಕೆಯಾಗದಂತೆ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಡಲಾಗಿದ್ದು, ಸಂಪೂರ್ಣ ವಿಚಾರಣೆಯ ಬಳಿಕ ಈ ದಂಧೆಯ ಹಿಂದಿರುವ ಕಿಂಗ್‌ಪಿನ್‌ಗಳ ಮುಖವಾಡ ಕಳಚುವುದಾಗಿ ಭರವಸೆ ನೀಡಿದ್ದಾರೆ.



















