ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಗದೀಶ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದ್ದು, ಅವರ ಮನೆ, ಕಚೇರಿ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಕಾವೇರಿ ಭವನದಲ್ಲಿರುವ ಡಿಸಿ ಕಚೇರಿ, ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಜಗದೀಶ್ ನಿವಾಸ, ಯಲಹಂಕ, ದೇವನಹಳ್ಳಿ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಜಗದೀಶ್ ಅವರು ಈ ಹಿಂದೆ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೇಳೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಾಭಾರೆ ಮಾಡಿರುವ ಆರೋಪ ಕೇಳಿಬಂದಿದೆ. ಯಲಹಂಕ ಭಾಗದಲ್ಲಿನ 9 ಎಕರೆ ಹಾಗೂ 2 ಎಕರೆ ಸರ್ಕಾರಿ ಜಮೀನು ಖಾಸಗಿಯವರಿಗೆ ವರ್ಗಾವಣೆ ಮಾಡಿರುವ ಆರೋಪದಡಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಅಕ್ರಮ ನಡೆದಿರುವ ಪ್ರಾಥಮಿಕ ಮಾಹಿತಿ ದೊರೆತ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಗದೀಶ್ ಸೇರಿದಂತೆ ನಾಲ್ವರು ಆರೋಪಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ.
ಸರ್ಕಾರಿ ಜಮೀನುಗಳನ್ನು ಭೂಗಳ್ಳರಿಗೆ ಪರಾಭಾರೆ ಮಾಡಿ ಕೋಟ್ಯಂತರ ರೂಪಾಯಿ ಕಿಕ್‌ಬ್ಯಾಕ್ ಪಡೆದಿರುವ ಆರೋಪದ ಕುರಿತು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ 32 ಗುಂಟೆ ಭೂಮಿ ಒತ್ತುವರಿ ಆರೋಪ : Chairman Club ವಿರುದ್ಧ ‘ಲೋಕಾ’ಗೆ N.R ರಮೇಶ್ ದೂರು!


















