ಮಂಗಳೂರು: ಇಸ್ರೇಲ್ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ 41 ವರ್ಷದ ಶಡ್ರಕ್ ಇಮ್ಯಾನುವೆಲ್ ಮೃತಪಟ್ಟ ದುರ್ದೈವಿ. ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಶಡ್ರಕ್, ಮೊದಲು ಟೆಲ್ ಅವೀವ್ನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ಇಸ್ರೇಲ್ನ ನಝರೆತ್ ಸಮೀಪದ ನೊಫ್ ಹಗಲಿಲ್ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಗೆ ಸೇರಿದ್ದರು.
ಅಕ್ಟೋಬರ್ 16ರಂದು ರಾತ್ರಿ 8:49ಕ್ಕೆ ಶಡ್ರಕ್ ತಮ್ಮ ಪತ್ನಿಗೆ ಕೊನೆಯದಾಗಿ ಸಂದೇಶ ಕಳುಹಿಸಿದ್ದರು ಮತ್ತು ಅದಕ್ಕೂ ಮೊದಲು ಮನೆಯವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದರು. ಆ ಬಳಿಕ ಅವರು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದು, ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದೀಗ ಶಡ್ರಕ್ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.


















