ಬೆಳಗಾವಿ : ಜಿಲ್ಲೆಯಲ್ಲಿ ಮೊಬೈಲ್ ನೀಡಲು ನಿರಾಕರಿಸಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಳಗಾವಿ ನಗರದ ಬಿಕೆ ಕಂಗ್ರಾಳಿ ನಿವಾಸಿ ಜಯಶ್ರೀ ಪವಾರ್ (48) ಶಿಕ್ಷೆಗೆ ಗುರಿಯಾದ ಮಹಿಳೆಯಾಗಿದ್ದು, ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.
2023ರ ಏಪ್ರಿಲ್ 30ರಂದು ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ನಾಗರಾಜ್ ರಾಗಿಪಾಟೀಲ್ (36) ಎಂಬಾತನನ್ನು ಜಯಶ್ರೀ ಪವಾರ್ ಹತ್ಯೆ ಮಾಡಿದ್ದಳು.
ಘಟನೆಯ ದಿನ ನಾಗರಾಜ್ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಮದ್ಯದ ಅಮಲಿನಲ್ಲಿದ್ದ ಜಯಶ್ರೀ ಅವರನ್ನು ಅಡ್ಡಗಟ್ಟಿದ್ದಳು. ಬಳಿಕ ಮೊಬೈಲ್ ಫೋನ್ ನೀಡುವಂತೆ ಕೇಳಿದ್ದಳು ಎನ್ನಲಾಗಿದೆ. ಆದರೆ ನಾಗರಾಜ್ ಮೊಬೈಲ್ ನೀಡಲು ನಿರಾಕರಿಸಿದ ಹಿನ್ನೆಲೆ, ಕೋಪಗೊಂಡ ಜಯಶ್ರೀ ಚಾಕುವಿನಿಂದ ಆತನ ಎದೆಗೆ ಇರಿದಿದ್ದಳು. ಗಂಭೀರವಾಗಿ ಗಾಯಗೊಂಡ ನಾಗರಾಜ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದ.
ಈ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಯಶ್ರೀ ಪವಾರ್‌ಗೆ 7 ವರ್ಷಗಳ ಸಜೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವು.. ಮೂವರಿಗೆ ಗಾಯ!


















