ತಿರುವನಂತಪುರ: 15 ವರ್ಷದ ಬಾಲಕನನ್ನು ಐಸಿಸ್ (ISIS) ಭಯೋತ್ಪಾದಕ ಸಂಘಟನೆಗೆ ಸೇರಿಸಲು ಸ್ವತಃ ಆತನ ತಾಯಿಯೇ ಬ್ರೈನ್ ವಾಶ್ ಮಾಡಿರುವ ಆಘಾತಕಾರಿ ಘಟನೆ ಕೇರಳದಲ್ಲಿ ಬೆಳಕಿಗೆ ಬಂದಿದೆ. ಬ್ರಿಟನ್‌ನಲ್ಲಿ ನೆಲೆಸಿರುವ ಐಸಿಸ್ ಬೆಂಬಲಿಗನೊಂದಿಗೆ ಸೇರಿ ತಾಯಿ ಈ ಕೃತ್ಯ ಎಸಗಿದ್ದಾರೆ ಎಂದು ಕೇರಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೇರಳ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಬ್ರಿಟನ್‌ನ ಲೀಸೆಸ್ಟರ್‌ನಲ್ಲಿ ವಾಸವಿರುವ ‘ಅನ್ಜಾರ್’ ಎಂಬಾತನೊಂದಿಗೆ ಸೇರಿ ಬಾಲಕನ ತಾಯಿ ಫಿದಾ ಮೊಹಮ್ಮದ್ ಅಲಿ, ತನ್ನ ಮಗನಿಗೆ ಇತರ ಧರ್ಮಗಳ ವಿರುದ್ಧ ದ್ವೇಷ ಸಾಧಿಸುವುದನ್ನು ಕಲಿಸಿದ್ದಾರೆ. ಐಸಿಸ್ ತತ್ವಗಳೇ ಇಸ್ಲಾಂನ ಶ್ರೇಷ್ಠ ಮಾರ್ಗ ಎಂದು ನಂಬಿಸಲು ಯತ್ನಿಸಿದ್ದಾರೆ.
ಲ್ಯಾಪ್‌ಟಾಪ್‌ನಲ್ಲಿ ಭೀಕರ ಹತ್ಯೆಗಳ ವಿಡಿಯೋ ಪ್ರದರ್ಶನ
ಯುಕೆಯಲ್ಲಿ ನೆಲೆಸಿದ್ದಾಗ ಆರೋಪಿ ಅನ್ಜಾರ್, ಬಾಲಕನಿಗೆ ತನ್ನ ಲ್ಯಾಪ್‌ಟಾಪ್ ಮೂಲಕ ಐಸಿಸ್ ಉಗ್ರರು ನಡೆಸಿದ ಭೀಕರ ಹತ್ಯೆಗಳ ಗ್ರಾಫಿಕ್ ವಿಡಿಯೋಗಳನ್ನು ತೋರಿಸುತ್ತಿದ್ದನು. ಈ ದೃಶ್ಯಗಳನ್ನು ತೋರಿಸುವ ಮೂಲಕ ಬಾಲಕನ ಮನಸ್ಸನ್ನು ಕಲುಷಿತಗೊಳಿಸಿ, ಐಸಿಸ್ ಸಿದ್ಧಾಂತಕ್ಕೆ ಆಕರ್ಷಿಸಲು ಪ್ರಯತ್ನ ನಡೆಸಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ತಾಯಿಯ ಪಾತ್ರವೇನು?
ತಾಯಿ ಫಿದಾ ಮೊಹಮ್ಮದ್ ಅಲಿ, ಅನ್ಜಾರ್‌ನ ಈ ಕೃತ್ಯಗಳಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಮಗನನ್ನು ಐಸಿಸ್‌ಗೆ ಸೇರಿಸಲು ಇಬ್ಬರೂ ಸೇರಿ ಸಂಚು ರೂಪಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರೂ ಸೇರಿ ಬಾಲಕನನ್ನು ಮಾನಸಿಕವಾಗಿ ಪರಿವರ್ತಿಸಲು ಯತ್ನಿಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
ವ್ಯಾಪಕ ಜಾಲದ ಶಂಕೆ
ಈ ಪ್ರಕರಣ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಕೇರಳದಲ್ಲಿ ಐಸಿಸ್ ಸ್ಲೀಪರ್ ಸೆಲ್‌ಗಳು (ಸುಪ್ತ ಜಾಲಗಳು) ಸಕ್ರಿಯವಾಗಿರುವ ಸಾಧ್ಯತೆಯಿದೆ. ಅನ್ಜಾರ್‌ನ ಸಹೋದರ ಸಿದ್ದಿಕುಲ್ 2016ರ ಕನಕಮಲ ಐಸಿಸ್ ಸಂಚು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದನು ಎಂಬುದು ಇಲ್ಲಿ ಗಮನಾರ್ಹ. ಎನ್‌ಐಎ (NIA) ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: “ಹಿಂದೂಗಳಿಲ್ಲದೆ ಜಗತ್ತೇ ಇಲ್ಲ” : ಮಣಿಪುರದಲ್ಲಿ ಮೋಹನ್ ಭಾಗವತ್ ಪ್ರತಿಪಾದನೆ


















