ಮಂಡ್ಯ : ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಬಹಿರಂಗ ಸಭೆಯಲ್ಲಿ ಭಾವುಕರಾಗಿದ್ದಾರೆ. ತಮ್ಮ ಹುಟ್ಟೂರು ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದ ತಮ್ಮ ತಾಯಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದಿರುವ ನೋವನ್ನು ಮಾರ್ಮಿಕವಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಎಲ್ಲವೂ ಸಿಕ್ತು, ಆದ್ರೆ ನಾನು ಆಸೆ ಪಟ್ಟಿದ್ದು ನನಗೆ ಸಿಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರಾಗಬೇಕು ಎಂಬ ಆಸೆಯನ್ನು ಹೊಂದಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದಿರುವುದು ನಿರಾಸೆಗೆ ಕಾರಣವಾಗಿದೆ. ಇದೇ ವಿಚಾರವನ್ನು ತಮ್ಮ ಕ್ಷೇತ್ರದ ಜನರ ಮುಂದೆ ಹೇಳಿಕೊಂಡಿರುವ ಅವರು, “ಅದೆನೋ ಗೊತ್ತಿಲ್ಲ, ನಾನು ಆಸೆ ಪಟ್ಟಿದ್ದು ನನಗೆ ಏನು ಸಿಗಲ್ಲ” ಎಂದು ಭಾವುಕರಾಗಿ ಹೇಳಿದ್ದಾರೆ. ಶಾಸಕರ ಈ ಹೇಳಿಕೆ ಇದೀಗ ಮಂಡ್ಯ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದು, ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ಗೆ ಬಂದ ಬಳಿಕ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಪುಟ ವಿಸ್ತರಣೆಯಲ್ಲೂ ಸಚಿವ ಸ್ಥಾನ ಕೈತಪ್ಪಿರುವುದರಿಂದ ಅವರು ಮತ್ತೆ ತಮ್ಮ ಮಾತೃ ಪಕ್ಷ ಜೆಡಿಎಸ್‌ನತ್ತ ಮುಖ ಮಾಡುತ್ತಾರೆಯೇ ಎಂಬ ಚರ್ಚೆ ಇದೀಗ ಆರಂಭವಾಗಿದೆ.
ಅರಕೆರೆ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯ ಬಗ್ಗೆಯೂ ಮಾತನಾಡಿದ ರಮೇಶ್ ಬಾಬು, “ಈ ಹಿಂದೇ ನಮ್ಮ ಕುಟುಂಬ ಒಂದೇ ಪಕ್ಷದಲ್ಲಿತ್ತು. ಈಗ 10 ವರ್ಷದಿಂದ ನಾನು ಬೇರೆ ಪಕ್ಷದಲ್ಲಿದ್ದೇನೆ. ನಮ್ಮ ತಂದೆ ಮೂಲ ಪಕ್ಷದಲ್ಲಿದ್ದಾರೆ” ಎಂದು ಹೇಳಿದ್ದಾರೆ. ಈ ಮಾತುಗಳ ಮೂಲಕ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ “ಮುಂದೆ ಎಲ್ಲಿರ್ತೇನೆ? ಏನಾಗ್ತೇನೋ ಗೊತ್ತಿಲ್ಲ” ಎಂದು ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಹೇಳಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಸಚಿವ ಸ್ಥಾನ ಕೈತಪ್ಪಿದ ಬೇಸರದಿಂದಲೇ ಈ ಮಾತುಗಳನ್ನು ಆಡಿದ್ದಾರೆಯೇ ಅಥವಾ ನಿಜವಾಗಿಯೂ ಕಾಂಗ್ರೆಸ್ ತೊರೆಯುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಇದನ್ನೂ ಓದಿ : ಇಂದಿನಿಂದ ರಂಗೇರಲಿದೆ ಮಳೆಗಾಲದ ಅಧಿವೇಶನ ; ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಸಮರ!


















