ನವದೆಹಲಿ : ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಹಂಚಿಕೊಂಡಿದ್ದ ಸೆಲ್ಫಿ ವಿಡಿಯೊ ಫೇಸ್‌ಬುಕ್‌ನಿಂದ ದಿಢೀರ್ ಕಣ್ಮರೆಯಾದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
ತಾಂತ್ರಿಕ ದೋಷದಿಂದಾಗಿ ವಿಡಿಯೊವನ್ನು ಕೆಲಕಾಲ ತೆಗೆದುಹಾಕಲಾಗಿತ್ತು ಎಂದು ಸಾಮಾಜಿಕ ಜಾಲತಾಣ ದೈತ್ಯ ‘ಮೆಟಾ’ (Meta) ಸಂಸ್ಥೆ ತಕ್ಷಣವೇ ಕ್ಷಮೆಯಾಚಿಸಿ ವಿಡಿಯೋವನ್ನು ಮರುಸ್ಥಾಪಿಸಿದೆ. ಆದರೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಮೆಟಾ ಹಾಗೂ ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಿದೆ.
ಮಧ್ಯರಾತ್ರಿಯ ಸಂದೇಶಕ್ಕೆ ದಾಖಲೆಯ ವೀಕ್ಷಣೆ
ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿ ಹೋರಾಟ ತೀವ್ರಗೊಂಡಿದ್ದ ವೇಳೆ, ಜುಲೈ 23ರ ಮಧ್ಯರಾತ್ರಿ ಪ್ರಧಾನಿ ಮೋದಿ ಅವರು ಸುಮಾರು 3 ನಿಮಿಷಗಳ ಸೆಲ್ಫಿ ವಿಡಿಯೋ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. “ಪ್ರಶ್ನೆಪತ್ರಿಕೆ ಸೋರಿಕೆ ಸಾಧಾರಣ ವಿಷಯವಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಮೋದಿ ಅಭಯ ನೀಡಿದ್ದರು. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 30.3 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿತ್ತು.
‘ಮೆಟಾ’ ಕ್ರಮಕ್ಕೆ ಬಿಜೆಪಿ ಆಕ್ರೋಶ
ಇಂತಹ ಮಹತ್ವದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ತೆಗೆದುಹಾಕಿದ್ದನ್ನು ತಕ್ಷಣವೇ ಗುರುತಿಸಿದ ಬಿಜೆಪಿ ನಾಯಕರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಮೆಟಾ ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದರು. “ಭಾರತದ ಪ್ರಧಾನಿಯವರ ಸಂದೇಶವನ್ನು ಸೆನ್ಸಾರ್ ಮಾಡಲು ಹಾಗೂ ಭಾರತೀಯರು ಏನನ್ನು ಓದಬೇಕು ಎಂದು ನಿರ್ಧರಿಸಲು ಈ ವಿದೇಶಿ ಪ್ಲಾಟ್‌ಫಾರ್ಮ್‌ಗೆ ಅಧಿಕಾರ ನೀಡಿದವರು ಯಾರು?” ಎಂದು ಬಿಜೆಪಿ ನಾಯಕ ತೇಜೀಂದರ್ ಬಗ್ಗಾ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.
ಸರ್ಕಾರದಿಂದ ಸಮನ್ಸ್ ಜಾರಿ
ಪ್ರಧಾನಿಯವರ ವಿಡಿಯೋ ಕಣ್ಮರೆಯಾದ ತಕ್ಷಣವೇ ಕಾರ್ಯಪ್ರವೃತ್ತರಾದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು, ಘಟನೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸುವಂತೆ ಮೆಟಾ ಮತ್ತು ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರಿಗೆ ಸಮನ್ಸ್ ರವಾನಿಸಿದ್ದಾರೆ. ಮತ್ತೊಂದೆಡೆ, “ಸಿಸ್ಟಮ್‌ನಲ್ಲಿ ಆದ ತಪ್ಪಿನಿಂದಾಗಿ ವಿಡಿಯೋ ಡಿಲೀಟ್ ಆಗಿತ್ತು, ತಕ್ಷಣವೇ ಅದನ್ನು ಮರುಸ್ಥಾಪಿಸಲಾಗಿದೆ,” ಎಂದು ಮೆಟಾ ಸಂಸ್ಥೆಯ ವಕ್ತಾರರು ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತರು, ಅಪರಾಧ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳನ್ನು ತಕ್ಷಣವೇ ಬಿಡುಗಡೆ ಮಾಡಿ : ಸುಪ್ರೀಂ ಕೋರ್ಟ್!



















