ಇಂದೋರ್ : ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್ ಅನ್ನು ಈಗ ‘ಭಿಕ್ಷುಕ ಮುಕ್ತ ನಗರ’ವನ್ನಾಗಿ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅಡಿಯಲ್ಲಿ ಭಿಕ್ಷುಕರನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಈ ವೇಳೆ ಅಧಿಕಾರಿಗಳಿಗೆ ಮಂಗಿಲಾಲ್ ಎಂಬ ಭಿಕ್ಷುಕ ಎದುರಾಗಿದ್ದು, ಆತನ ಹಿನ್ನೆಲೆ ಕೆದಕಿದಾಗ ಅಧಿಕಾರಿಗಳೇ ದಂಗಾಗಿದ್ದಾರೆ. ಏಕೆಂದರೆ, ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ವಾಸ್ತವದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.
ಅರಮನೆಯಂತಹ ಮನೆಗಳು, ಐಷಾರಾಮಿ ಕಾರು
ಅಂಗವಿಕಲನಾಗಿರುವ ಮಂಗಿಲಾಲ್ ಕಳೆದ ಹಲವು ವರ್ಷಗಳಿಂದ ಇಂದೋರ್‌ನ ಪ್ರಸಿದ್ಧ ಸರಫಾ ಬಜಾರ್ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದ. ಆದರೆ ತನಿಖೆಯ ವೇಳೆ ಈತ ಇಂದೋರ್ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ಮೂರು ಸ್ವಂತ ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದರಲ್ಲಿ ಭಗತ್ ಸಿಂಗ್ ನಗರದಲ್ಲಿರುವ ಮೂರು ಅಂತಸ್ತಿನ ಕಟ್ಟಡವೂ ಸೇರಿದೆ. ಅಚ್ಚರಿಯ ವಿಷಯವೆಂದರೆ, ಈತ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯೂ ಒಂದು ಮನೆಯನ್ನು ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಈತನ ಬಳಿ ಒಂದು ಸ್ವಿಫ್ಟ್ ಡಿಸೈರ್ ಕಾರು ಇದ್ದು, ಅದನ್ನು ಓಡಿಸಲು ಮಾಸಿಕ 10 ರಿಂದ 12 ಸಾವಿರ ರೂಪಾಯಿ ಸಂಬಳ ನೀಡಿ ಒಬ್ಬ ಚಾಲಕನನ್ನು ಕೂಡ ನೇಮಿಸಿಕೊಂಡಿದ್ದಾನೆ.
ಭಿಕ್ಷಾಟನೆಯ ಜೊತೆಗೆ ಬಡ್ಡಿ ವ್ಯವಹಾರ
ಮಂಗಿಲಾಲ್ ಕೇವಲ ಭಿಕ್ಷೆ ಬೇಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಿಕ್ಷಾಟನೆಯಿಂದ ಬರುತ್ತಿದ್ದ ಹಣವನ್ನು ಈತ ಸರಫಾ ಬಜಾರ್‌ನ ಸಣ್ಣಪುಟ್ಟ ವ್ಯಾಪಾರಿಗಳಿಗೆ ಹೆಚ್ಚಿನ ಬಡ್ಡಿಗೆ ಸಾಲವಾಗಿ ನೀಡುತ್ತಿದ್ದ. ಪ್ರತಿದಿನ ಭಿಕ್ಷಾಟನೆಯಿಂದಲೇ ಈತ 500 ರಿಂದ 1000 ರೂಪಾಯಿಗಳವರೆಗೆ ಸಂಪಾದಿಸುತ್ತಿದ್ದನು. ಈತನ ಬಳಿ ಮೂರು ಆಟೋ ರಿಕ್ಷಾಗಳಿದ್ದು, ಅವುಗಳನ್ನು ಬಾಡಿಗೆಗೆ ಬಿಡುವ ಮೂಲಕವೂ ಈತ ನಿರಂತರ ಆದಾಯ ಪಡೆಯುತ್ತಿದ್ದ. ಭಿಕ್ಷುಕನ ವೇಷದಲ್ಲಿದ್ದ ಈತನ ಆರ್ಥಿಕ ಬುದ್ಧಿವಂತಿಕೆ ಕಂಡು ತನಿಖಾಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡವು ಮಂಗಿಲಾಲ್‌ನನ್ನು ರಕ್ಷಿಸಿ ವಿಚಾರಣೆ ನಡೆಸಿದಾಗ ಈ ಎಲ್ಲಾ ಆಸ್ತಿ ವಿವರಗಳು ಹೊರಬಂದಿವೆ. ಆಸ್ತಿ ಇದ್ದರೂ ಸರ್ಕಾರಿ ಯೋಜನೆಯಡಿ ಮನೆ ಪಡೆದಿರುವುದು ಮತ್ತು ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಈಗ ಮಂಗಿಲಾಲ್‌ನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮತ್ತು ಆದಾಯದ ಮೂಲಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ, ಕನ್ನಡ ಬಾವುಟಕ್ಕೆ ಅಪಮಾನ | ಕನ್ನಡಿಗರ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ ಕಿಡಿಗೇಡಿ



















