ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಮಡಿವಾಳದಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಂಗಮ್ಮನಪಾಳ್ಯದ ನಿವಾಸಿ, ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್ ಕೊಲೆಯಾದ ದುರ್ದೈವಿ.
ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸುಹೇಲ್ ಮಡಿವಾಳದಿಂದ ಕೊರಮಂಗಲ ಕಡೆಗೆ ತಮ್ಮ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಟ್ರಾಫಿಕ್ ಜಾಮ್ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್ಗಳಿಂದ ಅವರ ಮೇಲೆ ಮುಗಿಬಿದ್ದಿದೆ. ನೂರಾರು ಜನರ ಕಣ್ಣೆದುರೇ ಸುಹೇಲ್ ಅವರನ್ನು ಕೊಚ್ಚಿ ಕೊಲೆ ಮಾಡಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಜನವರಿ 13ರಂದು ಬಂಡೆಪಾಳ್ಯದಲ್ಲಿ ರೌಡಿಶೀಟರ್ ಶಬ್ಬೀರ್ ಎಂಬಾತನ ಹತ್ಯೆ ನಡೆದಿತ್ತು. ಆ ಕೊಲೆ ಪ್ರಕರಣದಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್ ಹಾಗೂ ಇನ್ನೊಬ್ಬ ಸಹೋದರ ಆರೋಪಿಗಳಾಗಿದ್ದರು. ಈ ಪೈಕಿ ಖಲೀಂ ಇನ್ನೂ ಜೈಲಿನಲ್ಲಿದ್ದರೆ, ನಜೀರ್ ಒಂದು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.
ಸುಹೇಲ್ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದೆ ಮೆಡಿಕಲ್ ಶಾಪ್ ನಡೆಸಿಕೊಂಡು ಸಾಮಾನ್ಯ ಜೀವನ ನಡೆಸುತ್ತಿದ್ದರು. ಸಹೋದರರ ಮೇಲಿನ ಹಗೆತನಕ್ಕೆ ಶಬ್ಬೀರ್ ಸಹಚರರೇ ಮುಗ್ಧ ಸುಹೇಲ್ನನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ ; ಜೆರಾಕ್ಸ್ ಅಂಗಡಿಯಲ್ಲಿ ನಡೆದ ಹಲ್ಲೆ ಕೇಸ್ : ಮುಂದಾಗಿದ್ದೇನು?



















