ನವ ದೆಹಲಿ: ಡೆಲ್ಲಿ ತಂಡದ ನಾಯಕ ಆಯುಷ್ ಬದೋನಿ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಅವರು, ಭಾರತೀಯ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರನ್ನೊಳಗೊಂಡ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ರಾಂಚಿಯ ಜೆಎಸ್‌ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 2026-27ನೇ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ದೆಹಲಿ ನಾಯಕ ಆಯುಷ್ ಬದೋನಿ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಗುಜರಾತ್ ವಿರುದ್ಧದ ಹಿಂದಿನ ಪಂದ್ಯದಲ್ಲೂ ಅವರು 217 ರನ್ ಗಳಿಸಿ ಮಿಂಚಿದ್ದರು. ಇದೀಗ ಜಾರ್ಖಂಡ್ ವಿರುದ್ಧ 228 ಎಸೆತಗಳನ್ನು ಎದುರಿಸಿ ಅಜೇಯ 210 ರನ್ ಸಿಡಿಸಿದ್ದಾರೆ.
ಈ ಅಮೋಘ ಸಾಧನೆಯೊಂದಿಗೆ ಅವರು ದೆಹಲಿ ತಂಡದ ಪರ ಸತತ ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 21ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಬದೋನಿ ಪಾತ್ರರಾಗಿದ್ದಾರೆ. 2024-25ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಗೋವಾ ತಂಡದ ಸ್ನೇಹಲ್ ಕೌತಂಕರ್ ಈ ರೀತಿ ಸತತ ಎರಡು ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು.
ಪಂದ್ಯದ ಮೇಲೆ ದೆಹಲಿ ಬಿಗಿ ಹಿಡಿತ
ಆಯುಷ್ ಬದೋನಿ ಹಾಗೂ ಸುಮಿತ್ ಮಾಥುರ್ ಅವರ ಭರ್ಜರಿ ಜತೆಯಾಟದ ನೆರವಿನಿಂದ ದೆಹಲಿ ತಂಡವು ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ. ಈ ಇಬ್ಬರು ಬ್ಯಾಟರ್‌ಗಳು 334 ರನ್‌ಗಳ ಜತೆಯಾಟವಾಡಿ ತಂಡವನ್ನು ಸುಸ್ಥಿತಿಗೆ ತಂದರು. ಸುಮಿತ್ ಮಾಥುರ್ 253 ಎಸೆತಗಳಲ್ಲಿ ಅಜೇಯ 150 ರನ್ ಗಳಿಸಿದ್ದಾಗ, ದೆಹಲಿ ತಂಡವು 515 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು.ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಜಾರ್ಖಂಡ್ ತಂಡವು ಆರಂಭಿಕ ಆಘಾತ ಅನುಭವಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಜಾರ್ಖಂಡ್ ಪ್ರಮುಖ 4 ವಿಕೆಟ್ ಕಳೆದುಕೊಂಡಿದ್ದು, ದೆಹಲಿ ತಂಡವು 384 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಟೀಮ್ ಇಂಡಿಯಾ ಕದ ತಟ್ಟುತ್ತಿರುವ ಬದೋನಿ
ಸತತ ಎರಡು ದ್ವಿಶತಕ ಸಿಡಿಸಿರುವ ಆಯುಷ್ ಬದೋನಿ ಅವರ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ ಮಾಜಿ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್ ಅವರು ಬದೋನಿ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ವೇಗಿಗಳು ಹಾಗೂ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವ ಬದೋನಿ ಅವರ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಅವರು ಪ್ರಶಂಸಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕು. ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿನ ಉತ್ತಮ ಪ್ರದರ್ಶನದ ಆಧಾರದ ಮೇಲೆ ದೇವದತ್ ಪಡಿಕ್ಕಲ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಇದೇ ರೀತಿ ಆಯುಷ್ ಬದೋನಿ ಕೂಡ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದಿಂದ ಕರೆ ಪಡೆಯುವ ಸಾಧ್ಯತೆಯಿದೆ ಎಂದು ಪ್ರಿಯಾಂಕ್ ಪಾಂಚಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



















