ಬೆಂಗಳೂರು: ಕರ್ನಾಟಕ ಲೋಕಾಯುಕ್ತದಲ್ಲಿ ಬೆಂಗಳೂರು ನಗರ–1 ವಿಭಾಗದ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಐಪಿಎಸ್ ಅಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಅಕಾಲಿಕ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮರುಪರಿಶೀಲಿಸುವಂತೆ ಕೋರಿ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ, ಕರ್ನಾಟಕ ಲೋಕಾಯುಕ್ತವು ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ ಹಾಗೂ ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದ್ದು, ಇಂತಹ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ದಕ್ಷ, ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಅಧಿಕಾರಿಗಳಿಗೆ ಸಮರ್ಪಕ ಸೇವಾ ಅವಧಿ ಹಾಗೂ ಕಾರ್ಯನಿರ್ವಹಣೆಯ ಸ್ಥಿರತೆ ಕಲ್ಪಿಸುವುದು ಅತ್ಯಗತ್ಯ ಎಂದು ಉಲ್ಲೇಖಿಸಿದ್ದಾರೆ.
ಶಿವಪ್ರಕಾಶ್ ದೇವರಾಜು ಅವರು ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಗಳಲ್ಲಿ ಪರಿಣಾಮಕಾರಿ ಪಾತ್ರ ವಹಿಸಿ ಸಾರ್ವಜನಿಕ ವಿಶ್ವಾಸ ಗಳಿಸಿರುವ ಅಧಿಕಾರಿಯಾಗಿದ್ದಾರೆ. ಇಂತಹ ಅಧಿಕಾರಿಯನ್ನು ನಿಗದಿತ ಅವಧಿ ಪೂರ್ಣಗೊಳ್ಳುವ ಮುನ್ನವೇ ಮೂಲ ಇಲಾಖೆಗೆ ಹಿಂಪಡೆಯಲಾಗಿದೆ. ಇದರಿಂದ ತನಿಖೆಗಳ ನಿರಂತರತೆ, ಲೋಕಾಯುಕ್ತದ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.
ಅವರ ವರ್ಗಾವಣೆ ಅಥವಾ ಸೇವೆ ಹಿಂಪಡೆಯುವಿಕೆಗೆ ಸಂಬಂಧಿಸಿದ ಆಡಳಿತಾತ್ಮಕ ಕಾರಣಗಳು, ಅಗತ್ಯತೆಗಳು, ಸಾರ್ವಜನಿಕ ಹಿತಾಸಕ್ತಿಯ ಅಂಶಗಳು ಹಾಗೂ ಲೋಕಾಯುಕ್ತ ಸಂಸ್ಥೆಯ ಅಭಿಪ್ರಾಯವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಕೋರಿರುವ ಅವರು, ಸರ್ಕಾರ ಮತ್ತು ಲೋಕಾಯುಕ್ತದ ನಡುವೆ ಈ ಕುರಿತು ನಡೆದಿರುವ ಪತ್ರವ್ಯವಹಾರ ಹಾಗೂ ನಿರ್ಧಾರದ ಹಿನ್ನೆಲೆಯನ್ನೂ ಪಾರದರ್ಶಕವಾಗಿ ಪರಿಶೀಲಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಹೀಗಾಗಿ, ಶಿವಪ್ರಕಾಶ್ ದೇವರಾಜು ಅವರ ಅಕಾಲಿಕ ವರ್ಗಾವಣೆಯನ್ನು ಮರುಪರಿಶೀಲಿಸಿ ಅಗತ್ಯವಿದ್ದಲ್ಲಿ ವರ್ಗಾವಣೆ ಆದೇಶವನ್ನು ಪುನರ್‌ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಮನವಿಯಲ್ಲಿ ಕೋರಿದ್ದಾರೆ. ಜೊತೆಗೆ, ಮುಂದಿನ ದಿನಗಳಲ್ಲಿ ಲೋಕಾಯುಕ್ತದಂತಹ ಪ್ರಮುಖ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಸಮಂಜಸವಾದ ಕಾರ್ಯಾವಧಿ ಹಾಗೂ ಸೇವಾ ಸ್ಥಿರತೆ ಖಚಿತಪಡಿಸುವ ನೀತಿಯನ್ನು ರೂಪಿಸುವಂತೆಯೂ ಸಲಹೆ ಮಾಡಿದ್ದಾರೆ.



















