ಕೊಡಗು : ರೈತ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವ ಆಘಾತಕಾರಿ ಘಟನೆ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಲೀಲಾ (60) ಎಂಬವರು ಚಿರತೆ ದಾಳಿಗೆ ಗಂಭೀರ ಗಾಯಗೊಂಡಿದ್ದಾರೆ. ಕಾಫಿ ತೋಟದಲ್ಲಿ ಕಾರ್ಮಿಕರ ಕೆಲಸ ನೋಡುತ್ತಿದ್ದ ವೇಳೆ ಏಕಾಏಕಿ ಬಂದ ಚಿರತೆ ಲೀಲಾ ಅವರ ಮೇಲೆ ದಾಳಿ ಮಾಡಿದೆ.
ಮಹಿಳೆಯ ಎಡ ಕಿವಿ ಹಾಗೂ ದವಡೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಮಹಿಳೆಯ ಕಿರುಚಾಟ ಕೇಳಿ ಕಾರ್ಮಿಕರು ರಕ್ಷಣೆ ಮಾಡಿದ್ದು, ಗಾಯಾಳುವನ್ನು ಗೋಣಿಕೊಪ್ಪ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಶಶಿ ನೇತೃತ್ವದಲ್ಲಿ ಸಿಬ್ಬಂದಿ ಕಾಫಿ ತೋಟದಲ್ಲಿ ಚಿರತೆ ಸೆರೆಗೆ ಶೋಧ ಕಾರ್ಯ ನಡೆಸತ್ತಿದ್ದು, ಚಿರತೆಯ ಚಲನವಲನ ಪತ್ತೆಗೆ ಕಾಫಿ ತೋಟದಲ್ಲಿ ಬೋನ್ ಮತ್ತು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ : ಮುಂಗಾರು ಅಧಿವೇಶನಕ್ಕೆ ಬಿಜೆಪಿ ರಣತಂತ್ರ.. ಸರ್ಕಾರಕ್ಕೆ ಸದನದಲ್ಲೇ ಬಿಸಿ ಮುಟ್ಟಿಸಲು ಇಂದು ಮಹತ್ವದ ಸಭೆ


















