ಬೆಂಗಳೂರು : ಆಗಸ್ಟ್ 13ರಿಂದ ಆರಂಭವಾಗಲಿರುವ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಮುನ್ನ ಬಿಜೆಪಿ ತನ್ನ ಹೋರಾಟದ ರಣತಂತ್ರ ರೂಪಿಸಲು ಇಂದು ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಸುತ್ತಿದೆ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಯಾವೆಲ್ಲ ವಿಚಾರಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಲಿದೆ. ಸರ್ಕಾರದ ಆಡಳಿತ ವೈಫಲ್ಯಗಳು, ಅಭಿವೃದ್ಧಿ ಕುಂಠಿತ, ಸಚಿವ ಸಂಪುಟ ವಿಸ್ತರಣೆಯ ಬಳಿಕದ ಗೊಂದಲ, ಅಧಿಕಾರ ಹಂಚಿಕೆ ಸೇರಿದಂತೆ ಹಲವು ವಿಷಯಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಸಜ್ಜಾಗಿದೆ.
ಕೆಪಿಎಸ್ಸಿಯ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಆರೋಪ, ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ, ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ರೈತರ ಹೋರಾಟ ಹಾಗೂ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸದನದಲ್ಲಿ ಬಲವಾಗಿ ಪ್ರಶ್ನಿಸಲು ಬಿಜೆಪಿ ತೀರ್ಮಾನಿಸಿದೆ.
ಇನ್ನು ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನೂ ಬಿಜೆಪಿ ಸದನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವಿವಿಧ ಜನಪರ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಮುಂಗಾರು ಅಧಿವೇಶನದಲ್ಲೇ ತೀವ್ರ ಪ್ರತಿರೋಧ ನೀಡುವ ತಂತ್ರವನ್ನು ಬಿಜೆಪಿ ರೂಪಿಸುತ್ತಿದೆ.
ಜೆಡಿಎಸ್ ಜೊತೆಗಿನ ಸಮನ್ವಯ ಸಭೆಗೆ ಮುನ್ನವೇ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ಸಭೆ ನಡೆಸುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದಿದ್ದು, ಮುಂಬರುವ ಅಧಿವೇಶನದಲ್ಲಿ ಆಡಳಿತ ಪಕ್ಷದ ವಿರುದ್ಧ ಆಕ್ರಮಣಕಾರಿ ಧೋರಣೆ ಅನುಸರಿಸುವ ಸ್ಪಷ್ಟ ಸಂದೇಶವನ್ನು ನೀಡಿದೆ.
ಇದನ್ನೂ ಓದಿ : ಲಾಕಪ್‌ನಲ್ಲಿ ಪಿಜ್ಜಾ, ಐಷಾರಾಮಿ ಊಟ, ಹಾಸಿಗೆಗೆ ಬೇಡಿಕೆ ಇಟ್ಟ ಅತ್ಯಾಚಾರ ಆರೋಪಿ : ಪೊಲೀಸರೇ ದಂಗು!


















