ಮುಂಬೈ : ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ಕನಿಷ್ಠ 10ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮುಂಬೈನ ಚೆಂಬೂರಿನ ರಸ್ತೆ ಸಂಖ್ಯೆ 11ರಲ್ಲಿ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಶಾಲಾ ಬಸ್‌ನಲ್ಲಿ ಒಟ್ಟು 13 ಮಕ್ಕಳು ಪ್ರಯಾಣಿಸುತ್ತಿದ್ದ ವೇಳೆ ಏಕಾಏಕಿ ಬೃಹತ್ ಮರ ಬಸ್ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಮಕ್ಕಳು ಬಸ್‌ನೊಳಗೆ ಸಿಲುಕಿಕೊಂಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಮರವನ್ನು ಕತ್ತರಿಸಿ ತೆರವುಗೊಳಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ಗಾಯಾಳು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರದೇಶದಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಾಗೂ ಕೊಂಬೆಗಳನ್ನು ಕತ್ತರಿಸುವಂತೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದೇ ಪ್ರದೇಶದಲ್ಲಿ ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಪ್ರಿಯತಮೆಗಾಗಿ ಇಸ್ಲಾಂಗೆ ಮತಾಂತರವಾಗಿದ್ದ ಉತ್ತರ ಪ್ರದೇಶದ ಯುವಕ ಮತ್ತೆ ಹಿಂದೂ ಧರ್ಮಕ್ಕೆ!


















