ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿರುವ ಭಾಷಾ ನಿಯಮದ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರವೇ ರಾಜ್ಯಾಧ್ಯಕ್ಷ T. A. ನಾರಾಯಣ ಗೌಡ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರಸರ್ಕಾರ ಕೈಗೊಂಡಿರುವ ನಿರ್ಧಾರ ಹೊಸ ವಿವಾದಕ್ಕೆ ಕಾರಣವಾಗಿದೆ. ಮೇ 1ರಿಂದ ಮರಾಠಿ ಭಾಷೆ ಬಾರದ ಚಾಲಕರ ಡ್ರೈವಿಂಗ್ ಲೈಸೆನ್ಸ್ (DL) ನವೀಕರಣ ಮಾಡಲಾಗುವುದಿಲ್ಲ ಎಂಬ ನಿಯಮ ಜಾರಿಗೆ ಬರಲಿದ್ದು, ಮರಾಠಿ ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿದ್ದರೆ ಮಾತ್ರ DL ರಿನ್ಯೂವಲ್ ಮಾಡಲಾಗುತ್ತದೆ ಎಂಬ ಶರತ್ತು ವಿಧಿಸಲಾಗಿದೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ಕರವೇ, “ಯಾವ ರಾಜ್ಯದಲ್ಲಿ ವ್ಯವಹಾರ ಮಾಡಬೇಕಾದರೂ ಆ ರಾಜ್ಯದ ಭಾಷೆ ಕಲಿಯುವುದು ಅಗತ್ಯ” ಎಂದು ಹೇಳಿದೆ. ಕರ್ನಾಟಕದಲ್ಲಿಯೂ ಇದೇ ಮಾದರಿಯ ನಿಯಮ ಜಾರಿಯಾಗಬೇಕು. ಕನ್ನಡದಲ್ಲಿ ಸಂವಹನ ಮಾಡಲು ಬಾರದವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಬಾರದು ಎಂದು ಕರವೇ ಮನವಿ ಮಾಡಿದೆ.
“ರಾಜ್ಯದಲ್ಲಿ ಅನ್ಯ ಭಾಷಿಗರ ಪ್ರಾಬಲ್ಯ ಹೆಚ್ಚಾಗಿದೆ. ಕನ್ನಡದ ಅಸ್ತಿತ್ವವನ್ನು ಉಳಿಸಬೇಕಾದರೆ ಇಂತಹ ಕಟ್ಟುನಿಟ್ಟಿನ ಕ್ರಮ ಅಗತ್ಯ” ಎಂದು ಕರವೇ ಅಭಿಪ್ರಾಯಪಟ್ಟಿದೆ. ಇದೇ ವಿಷಯವನ್ನು ಟ್ವೀಟ್ ಮುಖಾಂತರವೂ ರಾಜ್ಯ ಸರ್ಕಾರದ ಗಮನಕ್ಕೆ ತಂದಿರುವ ಟಿ.ಎ. ನಾರಾಯಣ ಗೌಡ, “ಕನ್ನಡ ಬಾರದ ಚಾಲಕರಿಂದ ಸಂವಹನ ಸಮಸ್ಯೆಗಳು ಉಂಟಾಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಇದಲ್ಲದೆ, ಈ ವಿಷಯದಲ್ಲಿ ರಾಜ್ಯದ ವಿರೋಧ ಪಕ್ಷ ಬಿಜೆಪಿ ಕೂಡ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಕರವೇ ಆಗ್ರಹಿಸಿದೆ.
ಇದನ್ನೂ ಓದಿ: ದಯಾಮರಣಕ್ಕೆ ಅನುಮತಿ ಕೋರಿ ಸಿಎಂಗೆ ಪತ್ರ ಬರೆದ ವೃದ್ಧೆ!



















