ಹೈದರಾಬಾದ್ : ಹೈದರಾಬಾದ್ನ ಖಾಸಗಿ ಶಾಲೆಯೊಂದರಲ್ಲಿ 2ನೇ ತರಗತಿಯ ಹಿಂದೂ ವಿದ್ಯಾರ್ಥಿಗೆ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಕಲಿಯುವಂತೆ ಹೋಮ್ವರ್ಕ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಆರು ವರ್ಷದ ಮಗುವಿನ ಪೋಷಕರು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಧಾರ್ಮಿಕ ಒತ್ತಡದ ಆರೋಪ ಮಾಡಿದ್ದು, ಶಿಕ್ಷಣ ಇಲಾಖೆಯ ತಕ್ಷಣದ ಹಸ್ತಕ್ಷೇಪಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಈ ಬಗ್ಗೆ ತನಿಖೆಗೂ ಒತ್ತಾಯಿಸಿದ್ದಾರೆ.
ಹೋಮ್ವರ್ಕ್ ಡೈರಿಯಲ್ಲಿ ‘ಕಲಿಮಾ’
ತಮ್ಮ ಮಗ ಶಾಲೆಯಿಂದ ಮನೆಗೆ ಮರಳಿದಾಗ ಆತನ ಹೋಮ್ವರ್ಕ್ ಡೈರಿಯಲ್ಲಿ ‘ಮೊದಲ ಮತ್ತು ಎರಡನೇ ಕಲಿಮಾ’ ಹಾಗೂ ‘ಫತೇಹ್’ ಓದುವಂತೆ ಶಿಕ್ಷಕರು ಬರೆದಿದ್ದ ಸೂಚನೆ ಕಂಡು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ತಮ್ಮ ಧರ್ಮಕ್ಕೆ ವಿರುದ್ಧವಾದ ಧಾರ್ಮಿಕ ಆಚರಣೆಗಳನ್ನು ಕಲಿಯಲು ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸುವಂತಿಲ್ಲ ಎಂದು ಪೋಷಕರು ಹೇಳಿದ್ದು, ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ವಿಡಿಯೋ ಹಂಚಿಕೊಂಡಿರುವ ಮಗುವಿನ ಚಿಕ್ಕಮ್ಮ, ಈ ಹಿಂದೆಯೂ ಇಂತಹ ಬರವಣಿಗೆಗಳನ್ನು ಬರೆದು ನಂತರ ಅಳಿಸಿಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ. ಆರಂಭದಲ್ಲಿ ಇದು ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯ ಎಂದು ಶಾಲೆಯವರು ಹೇಳಿದ್ದರು, ಆದರೆ ವಿವಾದವಾಗುತ್ತಿದ್ದಂತೆ ಇದು ತಪ್ಪಾಗಿ ಬರೆಯಲ್ಪಟ್ಟಿದೆ ಎಂದು ಸಮರ್ಥನೆ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ರಾಜಕೀಯ ಸ್ವರೂಪ ಪಡೆದ ವಿವಾದ, ಕಣಕ್ಕಿಳಿದ ಬಿಜೆಪಿ
ಈ ಘಟನೆಯು ಮಗುವಿನ ಮೇಲೆ ಮಾನಸಿಕ ಒತ್ತಡವನ್ನು ಉಂಟುಮಾಡಿದೆ ಎಂದು ಕುಟುಂಬಸ್ಥರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ. ಈ ಮಧ್ಯೆ, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಬಿಜೆಪಿ ನಾಯಕರು ಮಗುವಿನ ಮನೆಗೆ ಭೇಟಿ ನೀಡಿ ಪೋಷಕರಿಗೆ ಬೆಂಬಲ ಸೂಚಿಸಿದ್ದಾರೆ. ಶಾಲೆಗಳಲ್ಲಿ ಇಂತಹ ಧಾರ್ಮಿಕ ಬೋಧನೆಗಳನ್ನು ಕಡ್ಡಾಯಗೊಳಿಸುತ್ತಿರುವುದರ ವಿರುದ್ಧ ಆಕ್ರೋಶ ಹೊರಹಾಕಿರುವ ಬಿಜೆಪಿ ನಾಯಕರು, ಶಾಲೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಲೆಯ ಸ್ಪಷ್ಟನೆ ಏನು?
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಪ್ರಕರಣದ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ವಿವಾದಿತ ತರಗತಿಯಲ್ಲಿ ಒಟ್ಟು 25 ವಿದ್ಯಾರ್ಥಿಗಳಿದ್ದು, ಅವರಲ್ಲಿ ಕೇವಲ ಒಬ್ಬರು ಮಾತ್ರ ಹಿಂದೂ ವಿದ್ಯಾರ್ಥಿಯಾಗಿದ್ದಾರೆ. ಇನ್ನುಳಿದ ಇಸ್ಲಾಮಿಕ್ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಹೋಮ್ವರ್ಕ್ ಸೂಚನೆಯನ್ನು ಶಿಕ್ಷಕರು ಆಕಸ್ಮಿಕವಾಗಿ ಈ ಮಗುವಿನ ಡೈರಿಯಲ್ಲಿ ಬರೆದಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಪೋಷಕರಿಂದ ಲಿಖಿತ ದೂರನ್ನು ಸ್ವೀಕರಿಸಲಾಗಿದ್ದು, ಕಾನೂನು ತಜ್ಞರ ಸಲಹೆ ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಹೆಣ್ಣು ಮಗು ಬಲಿ!



















