ಕನ್ನಡಿಗರ ಕೆಣಕಿ ಮಣ್ಣುಮುಕ್ಕಿದ್ದ ನಟ ಕಮಲ್ ಹಾಸನ್ ಇದೀಗ ಬಾಕ್ಸ್ ಆಫೀಸ್ ನಲ್ಲೂ ಮಕಾಡೆ ಮಲಗಿದ್ದಾರೆ. ಕಳೆದ ವಾರ ತೆರೆಗೆ ಅಪ್ಪಳಿಸಿದ್ದ ಕಮಲ್ ನಟನೆಯ ಥಗ್ ಲೈಫ್ ಸಿನಿಮಾ ಇಲ್ಲಿಯವರೆಗೂ 50 ಕೋಟಿ ಕಲೆಕ್ಷನ್ ಕೂಡಾ ಮಾಡಿಲ್ಲ.
ಬಹು ನಿರೀಕ್ಷೆಯೊಂದಿಗೆ ತೆರೆಗೆ ಅಪ್ಪಳಿಸಿದ್ದ ಸಿನಿಮಾ ಗಳಿಕೆಯಲ್ಲಿ ಹಿಂದೇಟು ಹಾಕುತ್ತಿದೆ. ಹೇಳಿ ಕೇಳಿ ಕಮಲ್ ಮಣಿರತ್ನಂ ಕಾಂಬಿನೇಷನ್ ನ ಸಿನಿಮಾ ಅಂದ್ ಮೇಲೆ ಅಭಿಮಾನಿಗಳ ಸುನಾಮಿ ಹರಿದು ಬರುತ್ತಿದೆ ಎಂದು ವಿತರಕರೂ ಖುಷ್ ಆಗಿದ್ದರು.
ಆದರೀಗ ವಾರ ಕಳೆಯುತ್ತಾ ಬಂದರೂ ಗಳಿಕೆ ಮಾತ್ರ ಆಮೆ ವೇಗದಲ್ಲೇ ಸಾಗಿದೆ. ಈ ನಡುವೆ, ಕಂಗಾಲಾಗಿರುವ ವಿತರಕರು, ತಮಗಾಗಿರುವ ನಷ್ಟ ಭರಿಸಿಕೊಡುವಂತೆ ಕಮಲ್ ಬೆನ್ನುಬಿದ್ದಿದ್ದಾರೆ. ಥಗ್ ಲೈಫ್ ಗೆ ಕಮಲ್ ಹಾಸನ್ ಮತ್ತು ಮಣಿರತ್ನಂ ಇಬ್ಬರೂ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಸಿನಿಮಾಗೆ 300 ಕೋಟಿ ಹಣ ಹಾಕಲಾಗಿದೆ.
ಸಿನಿಮಾದ ಒಟಿಟಿ ರೈಟ್ಸ್ ಮೂಲಕವೇ 150 ಕೋಟಿ ರೂ ಗಳಿಸಲಾಗಿದೆ. ಉಳಿದಂತೆ, ಟಿವಿ ರೈಟ್ಸ್ ನಿಂದ 50 ಕೋಟಿ ಬಂದರೂ ನಿರ್ಮಾಪಕರಿಗೆ ಕನಿಷ್ಠ ಪಕ್ಷ 100 ಕೋಟಿ ರೂ.ಗೂ ಹೆಚ್ಚು ನಷ್ಟವಾಗುವ ಸಾಧ್ಯತೆಗಳಿವೆ. ಇದರ ನಡುವೆ, ದೊಡ್ಡ ಲಾಭದ ನಿರೀಕ್ಷೆಯಲ್ಲಿ ವಿತರಣೆ ಹಕ್ಕು ಪಡೆದಿದ್ದವರು ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.



















