ಉಡುಪಿ : ಜೆಸಿಟಿ (ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ) ನೇತೃತ್ವದಲ್ಲಿ ದೇಶಾದ್ಯಂತ ಇಂದು ಜೈಲ್ ಭರೋ, ರಸ್ತೆ ತಡೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಉಡುಪಿಯ ಪ್ರಧಾನ ಅಂಚೆ ಕಚೇರಿ ಎದುರು ಜೆಸಿಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು, ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಿಜಿ ರಾಮ್ ಜಿ’ ಯೋಜನೆ ರದ್ದುಗೊಳಿಸಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು ಹಾಗೂ ಕನಿಷ್ಠ ಮೂಲ ವೇತನ ಜಾರಿ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರ ಕಾರ್ಮಿಕ ಪರ ನೀತಿಗಳನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಪ್ರತಿಭಟನೆಯಲ್ಲಿ ಜೆಸಿಟಿ ಮುಖಂಡ ಸುರೇಶ್ ಕಲ್ಲಾಗಾರ, ಶಶಿಧರ್ ಗೊಲ್ಲ, ಕವಿರಾಜ್, ವಾಮನ ಪೂಜಾರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ : ಹೊಸ ‘ವಿಬಿ-ಜಿ ರಾಮ್ ಜಿ’ ಯೋಜನೆಯಿಂದ ಗ್ರಾಮೀಣ ಉದ್ಯೋಗ ಸೃಷ್ಟಿ ಶೇ.50ರಷ್ಟು ಕುಸಿತ!



















