ಜೆರುಸಲೇಮ್ : ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ರಕ್ಷಣಾ ಪಡೆಗಳ (IDF) ಸೈನಿಕನೊಬ್ಬ ಏಸುಕ್ರಿಸ್ತರ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಕೃತ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಸಂಚಲನ ಮೂಡಿಸಿದೆ. ಆರಂಭದಲ್ಲಿ ಈ ಬಗ್ಗೆ ಮೌನ ವಹಿಸಿದ್ದ ಇಸ್ರೇಲ್ ಸೇನೆಯು, ಬಳಿಕ ಫೋಟೋ ಅಸಲಿ ಎಂದು ಒಪ್ಪಿಕೊಂಡಿದ್ದು, ತಪ್ಪಿತಸ್ಥ ಸೈನಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.
ಪ್ಯಾಲೆಸ್ತೀನ್ ಪತ್ರಕರ್ತ ಯೂನಿಸ್ ತಿರಾವಿ ಎಂಬವರು ತಮ್ಮ ಎಕ್ಸ್ (X) ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದರು. ಲೆಬನಾನ್‌ನಲ್ಲಿನ ಕ್ರಿಶ್ಚಿಯನ್ನರ ಬಾಹುಳ್ಯದ ‘ದಬೆಲ್’ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯೇಸುವಿನ ಪ್ರತಿಮೆಯನ್ನು ಹಾನಿಗೊಳಿಸುತ್ತಿರುವ ಸೈನಿಕನ ಫೋಟೋ ಕಂಡು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಕೇವಲ ಒಂದು ಧರ್ಮಕ್ಕೆ ಮಾಡಿದ ಅವಮಾನವಲ್ಲ, ಬದಲಿಗೆ ಅಮಾನವೀಯತೆ ಮತ್ತು ಅಹಂಕಾರದ ಪರಮಾವಧಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಕಿಡಿಕಾರಿದ್ದಾರೆ.
ಐಡಿಎಫ್ ಸ್ಪಷ್ಟನೆ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾದವ್ ಶೋಶಾನಿ, “ಪ್ರಾಥಮಿಕ ತನಿಖೆಯಲ್ಲಿ ಈ ಫೋಟೋ ಅಸಲಿ ಎಂದು ದೃಢಪಟ್ಟಿದೆ. ಸೈನಿಕನ ಈ ವರ್ತನೆಯು ಇಸ್ರೇಲ್ ಸೇನೆಯ ಮೌಲ್ಯಗಳಿಗೆ ಮತ್ತು ಸೈನಿಕರಿಂದ ನಿರೀಕ್ಷಿಸುವ ಶಿಸ್ತಿಗೆ ತದ್ವಿರುದ್ಧವಾಗಿದೆ,” ಎಂದು ಹೇಳಿದ್ದಾರೆ. ಈ ಪ್ರಕರಣವನ್ನು ಉತ್ತರ ಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಸೈನಿಕನ ವಿರುದ್ಧ ಕಮಾಂಡಿಂಗ್ ಮಟ್ಟದಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುನರ್ನಿರ್ಮಾಣಕ್ಕೆ ನೆರವು
ಇಸ್ರೇಲ್ ಸೇನೆಯು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಸಮುದಾಯದ ಸಹಯೋಗದೊಂದಿಗೆ ಹಾನಿಗೊಳಗಾದ ಪ್ರತಿಮೆಯನ್ನು ಪುನರ್ನಿರ್ಮಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ದಕ್ಷಿಣ ಲೆಬನಾನ್‌ನಲ್ಲಿ ತಮ್ಮ ಕಾರ್ಯಾಚರಣೆಯು ಕೇವಲ ಹೆಜ್ಬುಲ್ಲಾ ಭಯೋತ್ಪಾದಕ ಸಂಘಟನೆಯನ್ನು ಗುರಿಯಾಗಿಸಿಕೊಂಡಿದೆಯೇ ಹೊರತು, ಯಾವುದೇ ಧಾರ್ಮಿಕ ಕೇಂದ್ರಗಳನ್ನಾಗಲಿ ಅಥವಾ ನಾಗರಿಕ ಮೂಲಸೌಕರ್ಯಗಳನ್ನಾಗಲಿ ಹಾನಿಗೊಳಿಸುವ ಉದ್ದೇಶ ತಮಗಿಲ್ಲ ಎಂದು ಐಡಿಎಫ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಛತ್ತೀಸ್‌ಗಢದಲ್ಲಿ ವಿಮಾನ ಪತನ.. ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು!



















