ನವದೆಹಲಿ: ವಿಮಾನ ಅಪಹರಣದಂತಹ ಗಂಭೀರ ಅಪಾಯವನ್ನು ಧೈರ್ಯದಿಂದ ಎದುರಿಸಿ ನೂರಾರು ಜೀವಗಳನ್ನು ಅಪಾಯದಿಂದ ಪಾರು ಮಾಡಲು ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಇಸ್ರೇಲ್‌ನ ಅಧ್ಯಕ್ಷ ಐಸಾಕ್ ಹೆರ್ಜೋಗ್ ನಾಗರಿಕ ಶೌರ್ಯ ಪ್ರಶಸ್ತಿ ಘೋಷಿಸಿದ್ದಾರೆ. ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹಪೈಲಟ್ ನಡೆಸಿದ ದಾಳಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದರೂ, ಮಚ್ಚಾರ್ ತೋರಿದ ಧೈರ್ಯವನ್ನು ಇಸ್ರೇಲ್ ಅಧ್ಯಕ್ಷರು ಶ್ಲಾಘಿಸಿದ್ದಾರೆ.ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಚೇತರಿಕೆಗೆ ಹಾರೈಸಿರುವ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್, ಅವರ ಧೈರ್ಯ, ವೃತ್ತಿಪರತೆ ಮತ್ತು ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ ಎಂದು ಹೇಳಿದ್ದಾರೆ. ಮಚ್ಚಾರ್ ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನರ ಪರವಾಗಿ ದೇಶದ ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವುದು ತಮಗೆ ಗೌರವದ ಸಂಗತಿ ಎಂದು ಅವರು ತಿಳಿಸಿದ್ದಾರೆ.
ವಿಮಾನದಲ್ಲಿ ನಡೆದಿದ್ದೇನು?
ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಟೆಲ್ ಅವೀವ್‌ನತ್ತ ಪ್ರಯಾಣಿಸುತ್ತಿದ್ದಾಗ, ಒಮಾನ್ ಮೂಲದ ಸಹಪೈಲಟ್ ಹಮಾಮ್ ಅಲ್-ಹಮ್ಮಾಮಿ ಅವರು ಕ್ಯಾಪ್ಟನ್ ಮಚ್ಚಾರ್ ಮೇಲೆ ವಿಮಾನದ ತುರ್ತು ಉಪಕರಣವಾದ ಕ್ರ್ಯಾಶ್ ಆಕ್ಸ್‌ನಿಂದ ದಾಳಿ ನಡೆಸಿ ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದರು ಎಂದು ವರದಿಯಾಗಿದೆ.ಈ ವೇಳೆ ವಿಮಾನವು ಕೇವಲ 30 ಸೆಕೆಂಡ್‌ಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ ಸುಮಾರು 16,000 ಅಡಿ ಕೆಳಕ್ಕೆ ಕುಸಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ವಿಮಾನದಲ್ಲಿದ್ದ ಆರು ಪ್ರಯಾಣಿಕರು ಒಳಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಗಿತ್ತು.ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಇಬ್ಬರು ಪೈಲಟ್‌ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು, ಅದನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಿದರು. ಈ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿತು ಎಂದು ವರದಿಯಾಗಿದೆ.
ಆರು ಇಸ್ರೇಲಿ ನಾಗರಿಕರಿಗೂ ಶೌರ್ಯ ಪ್ರಶಸ್ತಿ
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ, ಅಪಾಯದ ಸಂದರ್ಭಗಳಲ್ಲಿ ಇತರರ ಜೀವ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ನಾಗರಿಕರನ್ನು ಗೌರವಿಸುವ ಉದ್ದೇಶದಿಂದ ಇಸ್ರೇಲ್ ಅಧ್ಯಕ್ಷರು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದರು.ಇದೀಗ ಆರು ಇಸ್ರೇಲಿ ನಾಗರಿಕರಾದ ತ್ಸ್ವಿಕಾ ಮತ್ತು ತಾಲಿ ಮಾನೆಸ್, ಯಾನಿವ್ ಹಯೂನ್, ವೈದ್ಯ ಶೋಟಾ ಮುಸಾಯೆವ್, ಅಸಫ್ ರಾಜುವಾನ್ ಮತ್ತು ಓರ್ ಪಾರ್ಡಿಲೋವ್ ಅವರ ಧೈರ್ಯವನ್ನೂ ಹೆರ್ಜೋಗ್ ಶ್ಲಾಘಿಸಿದ್ದಾರೆ. ಅಪಾಯ ಎದುರಾದಾಗ ಹಿಂದೆ ಸರಿಯದೆ ಜೀವ ಉಳಿಸಲು ಮುಂದಾಗುವ ಮನೋಭಾವವೇ ನಿಜವಾದ ಶೌರ್ಯ ಎಂದು ಅವರು ಹೇಳಿದ್ದಾರೆ.
ಅಮೆರಿಕ ಸಂಸತ್ತಿನಲ್ಲೂ ಗೌರವದ ನಿರ್ಣಯ
ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯವನ್ನು ಗುರುತಿಸಿ ಅಕ್ಟೋಬರ್ 5ರಂದು ಅಮೆರಿಕದ ಸಂಸತ್ತಿನ ಸದಸ್ಯರು ನಿರ್ಣಯವೊಂದನ್ನು ಮಂಡಿಸಿದ್ದಾರೆ. ನ್ಯೂಜೆರ್ಸಿಯ ಸಂಸದ ಜೋಶ್ ಗಾಟ್‌ಹೈಮರ್ ಮಂಡಿಸಿದ ಎಚ್. ರೆಸ್. 1612 ನಿರ್ಣಯವನ್ನು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಗೆ ಕಳುಹಿಸಲಾಗಿದೆ. ರಿಪಬ್ಲಿಕನ್ ಪಕ್ಷದ ಮೈಕೆಲ್ ಮೆಕಾಲ್ ಮತ್ತು ಡಾನ್ ಬೇಕನ್ ಸಹ ನಿರ್ಣಯದ ಸಹಪ್ರಾಯೋಜಕರಾಗಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಮತ್ತು ಕರ್ತವ್ಯದಲ್ಲಿರದ ಪೈಲಟ್‌ಗಳು ಕಾಕ್‌ಪಿಟ್‌ನ್ನು ಸುರಕ್ಷಿತಗೊಳಿಸಿ ವಿಮಾನವನ್ನು ನೆಲಕ್ಕಿಳಿಸಲು ನೆರವಾದುದನ್ನೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಸಂಕಷ್ಟದ ಕ್ಷಣದಲ್ಲಿ ಕ್ಯಾಪ್ಟನ್ ಮಚ್ಚಾರ್ ತೋರಿದ ಧೈರ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ :ದೆಹಲಿಯಲ್ಲಿ ನಾಳೆ CJP ಪ್ರತಿಭಟನೆ : 23 ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ, 150 ಬಾಡಿಕ್ಯಾಮ್ ಬಳಕೆ



















