ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕುರಿತು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಪಠಾಣ್, ವೈಭವ್ ಅತ್ಯಂತ ಹಠಮಾರಿ ಸ್ವಭಾವದವರಾಗಿದ್ದು, ತಮ್ಮ ಬ್ಯಾಟ್ ಮೂಲಕ ಮೈದಾನದಲ್ಲಿ ತಾವು ಏನೆಲ್ಲಾ ಮಾಡಬಲ್ಲೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಲು ಸೂಕ್ತ ಅವಕಾಶಕ್ಕಾಗಿ ಕಾತರರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ನಡುವೆ ಪಠಾಣ್ ನೀಡಿರುವ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಸದ್ಯ ಟೀಮ್ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದು ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಸತತ ಅರ್ಧಶತಕ ಸಿಡಿಸಿರುವ ಅಭಿಷೇಕ್ ಶರ್ಮಾ ಅವರನ್ನು ಕೈಬಿಡುವುದು ಅಸಾಧ್ಯವಾಗಿದೆ. ಆದರೆ, ಮತ್ತೊಂದೆಡೆ ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇರ್ಫಾನ್ ಪಠಾಣ್, ಈ ಯುವ ಪ್ರತಿಭೆ ಅತ್ಯಂತ ವಿಶೇಷ ಆಟಗಾರನಾಗಿದ್ದು, ಒಂದು ವೇಳೆ ಆತ ಬೇರೊಬ್ಬ ಆಟಗಾರನನ್ನು ರಿಪ್ಲೇಸ್ ಮಾಡಿ ತಂಡವನ್ನು ಸೇರಿಕೊಂಡರೆ, ಆ ಆಟಗಾರನಿಗೆ ಮರಳಿ ಅದೇ ಸ್ಥಾನಕ್ಕೆ ಬರುವುದು ಅಸಾಧ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದಿಗ್ಗಜರಿಂದಲೂ ವೈಭವ್ ಪರ ಬ್ಯಾಟಿಂಗ್
ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2026ರ ಆವೃತ್ತಿಯಲ್ಲಿ ವಿಶ್ವದ ಶ್ರೇಷ್ಠ ಬೌಲರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಿರುವ ವೈಭವ್ ಮೇಲೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸುನಿಲ್ ಗವಾಸ್ಕರ್ ಹಾಗೂ ರವಿಶಾಸ್ತ್ರಿ ಅವರಂತಹ ದಿಗ್ಗಜ ಕ್ರಿಕೆಟಿಗರು ಕೂಡ ಆದಷ್ಟು ಬೇಗ ಈ ಎಡಗೈ ಬ್ಯಾಟರ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ನೀಡುವಂತೆ ಟೀಮ್ ಮ್ಯಾನೇಜ್‌ಮೆಂಟ್ ಅನ್ನು ಆಗ್ರಹಿಸುತ್ತಿದ್ದಾರೆ. ಆದರೆ, ತಂಡದ ಆಡಳಿತ ಮಂಡಳಿಯು ಈ ಆಟಗಾರ ಪ್ರಸ್ತುತ ಹಿರಿಯರೊಂದಿಗೆ ಕಲಿಯುವ ಹಂತದಲ್ಲಿದ್ದಾನೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಜುಲೈ 4ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಾದರೂ ಈ ಭರವಸೆಯ ಆಟಗಾರನಿಗೆ ಟೀಮ್ ಇಂಡಿಯಾ ಕ್ಯಾಪ್ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ‘ಭಾರತ ಅತ್ಯುತ್ತಮ ಕ್ರಿಕೆಟ್ ತಂಡ’ : ಟೀಕೆಗಳ ನಡುವೆ ಪಾಕ್ ಕೋಚ್ ಮೈಕ್ ಹೆಸ್ಸನ್ ಪ್ರಾಮಾಣಿಕ ನುಡಿ!



















