ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗುತ್ತಿರುವಂತೆಯೇ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ಎದುರಾಗುತ್ತಿದೆ. ಸರ್ಕಾರದ ವಿರುದ್ಧದ ಟೀಕೆಗಳು ಕೇವಲ ವಿರೋಧ ಪಕ್ಷಗಳಿಗೆ ಸೀಮಿತವಾಗದೆ, ಆಡಳಿತಾರೂಢ ಕಾಂಗ್ರೆಸ್‌ನ ಹಾಲಿ ಶಾಸಕರು, ಸಂಸದರು, ಸಚಿವರು ಹಾಗೂ ಮೂಲ ಕಾಂಗ್ರೆಸ್ಸಿಗರಿಂದಲೇ ಕೇಳಿಬರುತ್ತಿರುವುದು ಪಕ್ಷಕ್ಕೆ ತೀವ್ರ ಮುಜುಗರ ತಂದೊಡ್ಡಿದೆ.
ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರು ರೇವಂತ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸುವ ಮೂಲಕ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿ ಇಲ್ಲದ ಶಾಸಕರ ಕ್ಷೇತ್ರಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರವಾದ ಕೊಡಂಗಲ್ ಮತ್ತು ಸಚಿವರ ಕ್ಷೇತ್ರಗಳಿಗೆ ಮಾತ್ರ ಆದ್ಯತೆಯ ಮೇರೆಗೆ ಅಭಿವೃದ್ಧಿ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಉಳಿದ ಶಾಸಕರು ಮೂಲಸೌಕರ್ಯ ಕಾಮಗಾರಿಗಳಿಗೂ ಅನುದಾನ ಸಿಗದೆ ಪರದಾಡುವಂತಾಗಿದೆ ಎಂದು ಅಸಮಾಧಾನ ಹೊರಹಾಕಿರುವ ಅವರು, ರಾಜ್ಯದಲ್ಲಿ ಮತ್ತೊಂದು ರಾಜಕೀಯ ‘ಕುರುಕ್ಷೇತ್ರ’ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ರೇವಂತ್ ರೆಡ್ಡಿ ತಿರುಗೇಟು, ಶಾಸಕರ ಪ್ರತ್ಯುತ್ತರ
ಸ್ವಪಕ್ಷೀಯ ಶಾಸಕರ ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಯಾರ ಹೆಸರನ್ನೂ ಉಲ್ಲೇಖಿಸದೆ ತಮ್ಮದೇ ಪಕ್ಷದ ಕೆಲವು ನಾಯಕರಿಗೆ “ಹುಚ್ಚು ನಾಯಿಗಳು ಕಡಿದಿವೆ” ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆಯು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಸಾಂವಿಧಾನಿಕ ಮತ್ತು ಉನ್ನತ ರಾಜಕೀಯ ಹುದ್ದೆಯಲ್ಲಿರುವವರು ಮಾತನಾಡುವ ಘನತೆ ಇದೇನಾ ಎಂದು ರಾಜ್ ಗೋಪಾಲ್ ರೆಡ್ಡಿ ಪ್ರಶ್ನಿಸಿದ್ದಾರೆ. ಅಲ್ಲದೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದೇವೆ ಎಂಬ ಸರ್ಕಾರದ ಹೇಳಿಕೆಯನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭ್ರಷ್ಟಾಚಾರದ ಆರೋಪ
ಇದಕ್ಕೂ ಮುನ್ನ ಜಡ್ಚೆರ್ಲಾ ಶಾಸಕ ಜೆ. ಅನಿರುದ್ಧ್ ರೆಡ್ಡಿ ಅವರು ಸರ್ಕಾರಕ್ಕೆ ತೀವ್ರ ಹಾನಿಯುಂಟುಮಾಡುವ ಗಂಭೀರ ಆರೋಪವೊಂದನ್ನು ಮಾಡಿದ್ದರು. ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳಿಗೂ ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಂದ ಶೇ. 10ರಿಂದ 20ರಷ್ಟು ಕಮಿಷನ್ ಕೇಳುತ್ತಿದ್ದಾರೆ ಮತ್ತು ಅಕ್ರಮವಾಗಿ ಹಣ ನೀಡದಿದ್ದರೆ ಬಿಲ್‌ಗಳನ್ನು ತಡೆಹಿಡಿಯಲಾಗುತ್ತಿದೆ ಎಂದು ಅವರು ದೂರಿದ್ದರು. ಸುಮಾರು 40 ಕೋಟಿ ರೂಪಾಯಿಗಳಷ್ಟು ಅಭಿವೃದ್ಧಿ ಕಾಮಗಾರಿಗಳ ಬಿಲ್ ಬಾಕಿ ಉಳಿದಿರುವ ವಿಷಯವನ್ನು ಪ್ರಸ್ತಾಪಿಸಿರುವ ಅವರು, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲೂ ಬಯಲಾದ ಸಚಿವ-ಶಾಸಕರ ಕಿತ್ತಾಟ
ಪಕ್ಷದೊಳಗಿನ ಈ ಬಿಕ್ಕಟ್ಟು ಕೇವಲ ಅನುದಾನಕ್ಕೆ ಸೀಮಿತವಾಗಿಲ್ಲ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಇಂಡಿಯಾ’ (INDIA) ಒಕ್ಕೂಟದ ರಾಲಿಯ ಸಂದರ್ಭದಲ್ಲಿ ಹಿರಿಯ ಸಚಿವ ದಾಮೋದರ್ ರಾಜನರಸಿಂಹ ಮತ್ತು ಜುಕ್ಕಲ್ ಶಾಸಕ ಟಿ. ಲಕ್ಷ್ಮೀಕಾಂತ ರಾವ್ ನಡುವೆ ಸಾರ್ವಜನಿಕವಾಗಿಯೇ ತೀವ್ರ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಸಂಘಟನಾತ್ಮಕ ನೇಮಕಾತಿಗಳು ಮತ್ತು ಕ್ಷೇತ್ರಮಟ್ಟದ ಪ್ರಾಬಲ್ಯದ ವಿಚಾರದಲ್ಲಿ ಇವರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಮತ್ತೊಂದೆಡೆ, ಕೈಗಾರಿಕಾ ಸಚಿವ ಡಿ. ಶ್ರೀಧರ್ ಬಾಬು ಮತ್ತು ಪೆದ್ದಪಲ್ಲಿ ಸಂಸದ ಜಿ. ವಂಶಿ ಕೃಷ್ಣ ನಡುವೆಯೂ ಭಿನ್ನಮತ ಕಾಣಿಸಿಕೊಂಡಿದ್ದು, ಶಾಸಕರಾದ ವಿಜಯ ರಮಣ ರಾವ್ ಮತ್ತು ಮಕ್ಕನ್ ಸಿಂಗ್ ರಾಜ್ ಠಾಕೂರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ಕ್ರಮವನ್ನು ತಾರತಮ್ಯದಿಂದ ಜಾರಿಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಾಜಿ ಸಚಿವೆಯ ವಜಾ
ಮಾಜಿ ಸಚಿವೆ ಕೊಂಡಾ ಸುರೇಖಾ ಅವರ ಪುತ್ರಿ ಕೊಂಡಾ ಸುಷ್ಮಿತಾ ಅವರು, ರೇವಂತ್ ರೆಡ್ಡಿ ಅವರ ಆಪ್ತರ ವಿರುದ್ಧ ಭೂ ವ್ಯವಹಾರ ಮತ್ತು ಅಕ್ರಮಗಳ ಆರೋಪ ಮಾಡಿದ ಬೆನ್ನಲ್ಲೇ ಸುರೇಖಾ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಪಕ್ಷದ ಆಂತರಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. 2028ರ ವಿಧಾನಸಭಾ ಚುನಾವಣೆಗೂ ಮುನ್ನ ನಡೆಯಲಿರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMC) ಚುನಾವಣೆಯು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಅಗ್ನಿಪರೀಕ್ಷೆಯಾಗಲಿದೆ.
2020ರ ಪಾಲಿಕೆ ಚುನಾವಣೆ ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಹೈದರಾಬಾದ್ ವ್ಯಾಪ್ತಿಯ 24 ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಕಾಂಗ್ರೆಸ್ ವಿಫಲವಾಗಿತ್ತು. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಶಾಸಕರ ಅಹವಾಲುಗಳನ್ನು ಆಲಿಸುವುದು, ಸಚಿವರ ನಡುವಿನ ಪೈಪೋಟಿ ಶಮನಗೊಳಿಸುವುದು, ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸುವುದು ಮತ್ತು ಮುಖ್ಯಮಂತ್ರಿ ಹಾಗೂ ಪಕ್ಷದ ಸಂಘಟನೆಯ ನಡುವೆ ಸಮನ್ವಯ ಸಾಧಿಸುವ ದೊಡ್ಡ ಸವಾಲು ಎಐಸಿಸಿ ನೂತನ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಿ.ಎಂ. ಸಂದೀಪ್ ಕುಮಾರ್ ಅವರ ಮುಂದಿದೆ.



















