ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ದೈನಂದಿನ ಸಂಚಾರದ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಆದರೆ ಆದಾಯ ಹೆಚ್ಚಾದರೂ ನಿಗಮದ ಆರ್ಥಿಕ ಸ್ಥಿತಿ ಮಾತ್ರ ಸುಧಾರಿಸಿಲ್ಲ. 2025–26ನೇ ಹಣಕಾಸು ವರ್ಷದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಬರೋಬ್ಬರಿ 1,710.13 ಕೋಟಿ ರೂಪಾಯಿ ನಿವ್ವಳ ನಷ್ಟ ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಈ ನಷ್ಟ 1,405.67 ಕೋಟಿ ರೂಪಾಯಿಗಳಷ್ಟಿತ್ತು. ಅಂದರೆ ಒಂದೇ ವರ್ಷದಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಬಿಎಂಆರ್‌ಸಿಎಲ್‌ನ 20ನೇ ವಾರ್ಷಿಕ ವರದಿಯ ಪ್ರಕಾರ, ಪ್ರಯಾಣಿಕರಿಂದ ಬರುವ ಟಿಕೆಟ್ ಆದಾಯದಲ್ಲಿ ಭಾರಿ ಏರಿಕೆಯಾಗಿದೆ. ಟಿಕೆಟ್‌ಯೇತರ ಮೂಲಗಳಿಂದಲೂ ಆದಾಯ ಹೆಚ್ಚಿದೆ. ಆದರೂ ಸಾಲದ ಮೇಲಿನ ಬಡ್ಡಿ ಮತ್ತು ಇತರ ಹಣಕಾಸು ವೆಚ್ಚಗಳು ನಿಗಮದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿವೆ.
ಟಿಕೆಟ್ ಆದಾಯದಲ್ಲಿ ದಾಖಲೆ ಪ್ರಗತಿ
2025–26ನೇ ಸಾಲಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ಸಂಗ್ರಹದ ಮೂಲಕ 1,125.58 ಕೋಟಿ ರೂಪಾಯಿ ಆದಾಯ ಗಳಿಸಿದೆ. 2024–25ರಲ್ಲಿ ಈ ಆದಾಯ 753.59 ಕೋಟಿ ರೂಪಾಯಿಗಳಷ್ಟಿತ್ತು. ಈ ಮೂಲಕ ಟಿಕೆಟ್ ಆದಾಯದಲ್ಲಿ ಶೇ.49.36ರಷ್ಟು ಏರಿಕೆಯಾಗಿದೆ.ಪ್ರಯಾಣಿಕರ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳ ದಾಖಲಾಗಿದೆ. ಹಿಂದಿನ ವರ್ಷ 27.65 ಕೋಟಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದರೆ, 2025–26ರಲ್ಲಿ ಈ ಸಂಖ್ಯೆ 31.05 ಕೋಟಿಗೆ ಏರಿಕೆಯಾಗಿದೆ. ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.57 ಲಕ್ಷದಿಂದ 8.51 ಲಕ್ಷಕ್ಕೆ ಹೆಚ್ಚಿದೆ.ಹಳದಿ ಮಾರ್ಗದ ಕಾರ್ಯಾರಂಭ, ಎಲೆಕ್ಟ್ರಾನಿಕ್ ಸಿಟಿಯಂತಹ ಉದ್ಯೋಗ ಕೇಂದ್ರಗಳಿಗೆ ಸಂಪರ್ಕ ಹಾಗೂ 2025ರ ಫೆಬ್ರವರಿಯಲ್ಲಿ ಜಾರಿಯಾದ ಪ್ರಯಾಣ ದರ ಪರಿಷ್ಕರಣೆ ಈ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. 2025ರ ಆಗಸ್ಟ್ 14ರಂದು ಒಂದೇ ದಿನ 10.82 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ.
ಟಿಕೆಟ್ ಹೊರತಾಗಿಯೂ ಆದಾಯದ ಏರಿಕೆ
ಮೆಟ್ರೋ ನಿಗಮ ಕೇವಲ ಪ್ರಯಾಣ ದರವನ್ನೇ ಆದಾಯದ ಮೂಲವಾಗಿ ಅವಲಂಬಿಸಿಲ್ಲ. ನಿಲ್ದಾಣಗಳಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ, ಜಾಹೀರಾತು, ನಿಲ್ದಾಣಗಳ ಹೆಸರಿಡುವ ಹಕ್ಕು, ವಾಹನ ನಿಲುಗಡೆ ಮತ್ತು ಟೆಲಿಕಾಂ ಮೂಲಸೌಕರ್ಯಗಳ ಮೂಲಕವೂ ಆದಾಯ ಗಳಿಸುತ್ತಿದೆ.
ಈ ಮೂಲಗಳಿಂದ 2024–25ರಲ್ಲಿ 54.97 ಕೋಟಿ ರೂಪಾಯಿ ಆದಾಯ ಬಂದಿತ್ತು. 2025–26ರಲ್ಲಿ ಇದು 88.51 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಟಿಕೆಟ್‌ಯೇತರ ಆದಾಯದಲ್ಲಿ ಶೇ.61ರಷ್ಟು ಬೆಳವಣಿಗೆ ಕಂಡುಬಂದಿದೆ.ಒಟ್ಟಾರೆ ನಿಗಮದ ಒಟ್ಟು ಆದಾಯ 1,111.59 ಕೋಟಿ ರೂಪಾಯಿಯಿಂದ 1,624.62 ಕೋಟಿ ರೂಪಾಯಿಗೆ ಹೆಚ್ಚಾಗಿದೆ. ಆದರೂ ಆದಾಯದ ಏರಿಕೆ ನಷ್ಟವನ್ನು ತಡೆಯಲು ಸಾಧ್ಯವಾಗಿಲ್ಲ.
ನಷ್ಟ ಹೆಚ್ಚಾಗಲು ಕಾರಣವೇನು?
ನಮ್ಮ ಮೆಟ್ರೋ ನಷ್ಟ ಹೆಚ್ಚಾಗಲು ಪ್ರಮುಖ ಕಾರಣ ಸಾಲದ ಮೇಲಿನ ಹಣಕಾಸು ವೆಚ್ಚ. 2024–25ರಲ್ಲಿ 560 ಕೋಟಿ ರೂಪಾಯಿಗಳಷ್ಟಿದ್ದ ಹಣಕಾಸು ವೆಚ್ಚ 2025–26ರಲ್ಲಿ 1,793.03 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಮೂರು ಪಟ್ಟು ಹೆಚ್ಚಳವಾಗಿದೆ.ಮೆಟ್ರೋ ಮಾರ್ಗಗಳ ವಿಸ್ತರಣೆ, ಹೊಸ ಯೋಜನೆಗಳು, ಭೂಸ್ವಾಧೀನ, ಕಾಮಗಾರಿಗಳು ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗಿದೆ.
ಇದಕ್ಕಾಗಿ ಪಡೆದ ಸಾಲಗಳ ಮೇಲಿನ ಬಡ್ಡಿ ಮತ್ತು ಇತರ ಹಣಕಾಸು ವೆಚ್ಚಗಳು ನಿಗಮದ ಮೇಲೆ ಹೆಚ್ಚಿನ ಹೊರೆ ಸೃಷ್ಟಿಸಿವೆ.ಇದರ ಜತೆಗೆ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. 2024–25ರಲ್ಲಿ 665.50 ಕೋಟಿ ರೂಪಾಯಿಗಳಷ್ಟಿದ್ದ ಕಾರ್ಯಾಚರಣಾ ವೆಚ್ಚ 2025–26ರಲ್ಲಿ 823.69 ಕೋಟಿ ರೂಪಾಯಿಗೆ ತಲುಪಿದೆ. ಸವಕಳಿ ಮತ್ತು ಅಮೂರ್ತ ಆಸ್ತಿ ವೆಚ್ಚವೂ 576.79 ಕೋಟಿ ರೂಪಾಯಿಯಿಂದ 725.36 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಕಾರ್ಯಾಚರಣೆಯಲ್ಲಿ ಲಾಭ, ಒಟ್ಟಾರೆ ಲೆಕ್ಕದಲ್ಲಿ ನಷ್ಟ!
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ನಿಗಮದ ಕಾರ್ಯಾಚರಣೆ ಸಂಪೂರ್ಣ ನಷ್ಟದಲ್ಲಿಲ್ಲ. 2025–26ರಲ್ಲಿ ಬಿಎಂಆರ್‌ಸಿಎಲ್ 417.42 ಕೋಟಿ ರೂಪಾಯಿ ಕಾರ್ಯಾಚರಣಾ ಲಾಭ ದಾಖಲಿಸಿದೆ. ನಗದು ಲಾಭ 209.66 ಕೋಟಿ ರೂಪಾಯಿಗಳಷ್ಟಿದೆ. ಆದರೆ ಹಣಕಾಸು ವೆಚ್ಚ ಮತ್ತು ಸವಕಳಿ ವೆಚ್ಚಗಳನ್ನು ಸೇರಿಸಿದ ನಂತರ ಒಟ್ಟಾರೆ ಲೆಕ್ಕದಲ್ಲಿ ನಷ್ಟ ಕಾಣಿಸಿಕೊಂಡಿದೆ.ಮತ್ತೊಂದೆಡೆ, ರೈಲುಗಳ ಸಮಯಪಾಲನೆಯಲ್ಲಿ ಶೇ.99.8ರಷ್ಟು ಸಾಧನೆ ಮಾಡಿರುವುದಾಗಿ ವಾರ್ಷಿಕ ವರದಿ ತಿಳಿಸಿದೆ. ಪ್ರಯಾಣಿಕರ ಸೇವೆ ಮತ್ತು ಆದಾಯದ ದೃಷ್ಟಿಯಿಂದ ಪ್ರಗತಿ ಕಂಡಿದ್ದರೂ, ಸಾಲದ ಹೊರೆ ನಿಗಮದ ಆರ್ಥಿಕ ಸ್ಥಿತಿಗೆ ಸವಾಲಾಗಿದೆ.
ಸಾಲದ ಮಿತಿ 60 ಸಾವಿರ ಕೋಟಿ ರೂಪಾಯಿಗೆ ಏರಿಸುವ ಪ್ರಸ್ತಾವ!
ಮೆಟ್ರೋ ವಿಸ್ತರಣಾ ಯೋಜನೆಗಳಿಗೆ ಹಣಕಾಸು ಹೊಂದಿಸುವ ಉದ್ದೇಶದಿಂದ ನಿಗಮ ತನ್ನ ಸಾಲ ಪಡೆಯುವ ಮಿತಿಯನ್ನು 45 ಸಾವಿರ ಕೋಟಿ ರೂಪಾಯಿಯಿಂದ 60 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಲು ಷೇರುದಾರರ ಅನುಮೋದನೆ ಕೋರಿದೆ. 2028ರ ಮಾರ್ಚ್ ಅಂತ್ಯದ ವೇಳೆಗೆ ಬಾಕಿ ಇರುವ ಮತ್ತು ಪಡೆಯಬೇಕಿರುವ ಸಾಲಗಳ ಒಟ್ಟು ಮೊತ್ತ 56,087 ಕೋಟಿ ರೂಪಾಯಿಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.2026–27 ಮತ್ತು 2027–28ನೇ ಹಣಕಾಸು ವರ್ಷಗಳಲ್ಲಿ ಹೆಚ್ಚುವರಿಯಾಗಿ 14,200 ಕೋಟಿ ರೂಪಾಯಿ ಸಾಲ ಪಡೆಯುವ ನಿರೀಕ್ಷೆಯನ್ನೂ ನಿಗಮ ವ್ಯಕ್ತಪಡಿಸಿದೆ. ಇದರಲ್ಲಿ ಹಂತ 2 ಮತ್ತು ಹಂತ 3ರ ಯೋಜನೆಗಳಿಗೆ 11,647 ಕೋಟಿ ರೂಪಾಯಿ ಬಳಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.


















