ಬೆಂಗಳೂರು: ಭಾರತೀಯ ರೈಲ್ವೆಯು ತನ್ನ ಸರಕು ಸಾಗಣೆ ಮತ್ತು ಪಾರ್ಸೆಲ್ ಸೇವೆಗಳನ್ನು ಮತ್ತಷ್ಟು ಆಧುನೀಕರಿಸಲು ಮತ್ತು ಗ್ರಾಹಕರಿಗೆ ಸುಲಭಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಪ್ರಮುಖ 8 ಪ್ರಮುಖ ನಗರಗಳಲ್ಲಿ ‘ರೈಲ್ ಪಾರ್ಸೆಲ್ ಆ್ಯಪ್’ (Rail Parcel App) ಮೂಲಕ ನೂತನ ‘ಮನೆಯಿಂದ ಮನೆಗೆ’ (Door-to-Door) ಪಾರ್ಸೆಲ್ ಸೇವೆಗೆ ಚಾಲನೆ ನೀಡಲಾಗಿದೆ. ಈ ಹಿಂದೆ ಪಾರ್ಸೆಲ್ ಕಳುಹಿಸಲು ಅಥವಾ ಸ್ವೀಕರಿಸಲು ರೈಲ್ವೆ ನಿಲ್ದಾಣದ ಕಚೇರಿಗಳಿಗೆ ಅಲೆದಾಡಬೇಕಿದ್ದ ಕಷ್ಟಕ್ಕೆ ಇದರಿಂದ ಮುಕ್ತಿ ಸಿಕ್ಕಂತಾಗಿದೆ.
ಯಾವೆಲ್ಲಾ ನಗರಗಳಲ್ಲಿ ಈ ಸೇವೆ ಲಭ್ಯ?
ಸದ್ಯದ ಆರಂಭಿಕ ಹಂತದಲ್ಲಿ ಈ ನೂತನ ಸೇವೆಯು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು ಮತ್ತು ಪುಣೆ ಸೇರಿದಂತೆ ಒಟ್ಟು ಎಂಟು ಪ್ರಮುಖ ನಗರಗಳಲ್ಲಿ ಜಾರಿಗೆ ಬಂದಿದೆ. ಭವಿಷ್ಯದ ದಿನಗಳಲ್ಲಿ ದೇಶದ ಪ್ರತಿಯೊಂದು ನಗರಗಳಿಗೂ ಸೇವೆಯನ್ನ ವಿಸ್ತರಿಸುವ ಗುರಿ ಇದೆ.
ಸೇವೆಯ ವಿಶೇಷತೆಗಳು ಮತ್ತು ಕಾರ್ಯನಿರ್ವಹಣೆ ಹೇಗೆ?
ಡಿಜಿಟಲ್ ಬುಕಿಂಗ್: ಗ್ರಾಹಕರು ‘ರೈಲ್ ಪಾರ್ಸೆಲ್ ಆ್ಯಪ್’ ಮೂಲಕ ಆನ್ ಲೈನ್ ನಲ್ಲೇ ಪಾರ್ಸೆಲ್ ಬುಕ್ ಮಾಡಬಹುದು ಹಾಗೂ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಮನೆಬಾಗಿಲಿಗೆ ಬಂದು ಪಿಕ್ಅಪ್: ಆ್ಯಪ್ ನಲ್ಲಿ ಬುಕ್ ಮಾಡಿದ ಬಳಿಕ, ರೈಲ್ವೆಯ ಅಧಿಕೃತ ಲಾಜಿಸ್ಟಿಕ್ಸ್ ಪಾಲುದಾರರು ಗ್ರಾಹಕರ ಮನೆ ಬಾಗಿಲಿಗೇ ಬಂದು ಪಾರ್ಸೆಲ್ ಅನ್ನು ಸಂಗ್ರಹಿಸುತ್ತಾರೆ
ಸಂಗ್ರಹಿಸಿದ ಪಾರ್ಸೆಲ್ ಗಳನ್ನು ನಿಗದಿತ ರೈಲುಗಳ ಮೂಲಕ ನಿಗದಿತ ಸ್ಥಳಗಳಿಗೆ ರೈಲ್ವೆ ಇಲಾಖೆಯು ಸುರಕ್ಷಿತವಾಗಿ ಸಾಗಿಸುತ್ತದೆ.
ನಿಗದಿತ ಸ್ಥಳ ತಲುಪಿದ ನಂತರ ಲಾಜಿಸ್ಟಿಕ್ಸ್ ಪಾಲುದಾರರು ನಿಗದಿತ ವಿಳಾಸಕ್ಕೆ ಪಾರ್ಸೆಲ್ ಅನ್ನು ತಲುಪಿಸಲಿದ್ದಾರೆ.
ಗ್ರಾಹಕರಿಗೆ ಸಿಗುವ ಇತರ ಸೌಲಭ್ಯಗಳು
ಈ ಹೊಸ ವ್ಯವಸ್ಥೆಯಲ್ಲಿ ಪಾರ್ಸೆಲ್ಗಳ ಸುರಕ್ಷತೆಗಾಗಿ ಪ್ಯಾಕಿಂಗ್ ಮತ್ತು ಇತರೆ ಮೌಲ್ಯವರ್ಧಿತ ಸೇವೆಗಳನ್ನು ಸಹ ಲಾಜಿಸ್ಟಿಕ್ಸ್ ಪಾಲುದಾರರು ಒದಗಿಸಲಿದ್ದಾರೆ. ಅಲ್ಲದೆ, ರೈಲು ಹೊರಡುವ ದಿನಾಂಕಕ್ಕೂ 15 ದಿನಗಳ ಮುಂಚಿತವಾಗಿ ಬುಕಿಂಗ್ ಮಾಡಲು ಅವಕಾಶವಿದ್ದು, ಪ್ರಯಾಣದ ದಿನಕ್ಕಿಂತ 1 ದಿನ ಮುಂಚಿತವಾಗಿ ಬುಕಿಂಗ್ ಮುಕ್ತಾಯಗೊಳ್ಳುತ್ತದೆ. ಒಂದು ವೇಳೆ ಬುಕಿಂಗ್ ರದ್ದುಪಡಿಸಿದರೆ, ಕೇವಲ 10 ರೂ. ಶುಲ್ಕ ಕಡಿತಗೊಳಿಸಿ ಸಂಪೂರ್ಣ ರೈಲು ಸರಕು ಸಾಗಣೆ ಶುಲ್ಕವನ್ನು ಮರುಪಾವತಿಸುವ ಸೌಲಭ್ಯವನ್ನೂ ನೀಡಲಾಗಿದೆ.
ಇದನ್ನೂ ಓದಿ:ಎಂ.ಫಿಲ್ ಮುಗಿಸಿದವರಿಗೆ ಗುಡ್ ನ್ಯೂಸ್ : ಬೆಂಗಳೂರಿನ IISc ಸಂಸ್ಥೆಯಲ್ಲಿ ನೇಮಕಾತಿ


















