ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಇಂದು ಎರಡು ಬೃಹತ್ ಪ್ರತಿಭಟನಾ ಮೆರವಣಿಗೆಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ. ಒಂದೆಡೆ ಮತದಾರರ ಪಟ್ಟಿ ಅಕ್ರಮವನ್ನು ಖಂಡಿಸಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟ ಬೃಹತ್ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದರೆ, ಇನ್ನೊಂದೆಡೆ 1984ರ ಸಿಖ್ ವಿರೋಧಿ ದಂಗೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಗಿಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂಡಿಯಾ ಒಕ್ಕೂಟ ‘ಚಲೋ ದೆಹಲಿ’ ರ್ಯಾಲಿ
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟವು ರಾಮ್ಲೀಲಾ ಮೈದಾನದಲ್ಲಿ ‘ಚಲೋ ದೆಹಲಿ’ ಮೆರವಣಿಗೆ ಆಯೋಜಿಸಿದೆ. “ವೋಟ್ ಬಚಾವೋ, ದೇಶ್ ಬಚಾವೋ” ಎಂಬ ಘೋಷಣೆಯಡಿ ಆಯೋಜಿಸಲಾಗಿರುವ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ತೇಜಸ್ವಿ ಯಾದವ್ ಹಾಗೂ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸುತ್ತಿದ್ದಾರೆ.
ರಾಷ್ಟ್ರಮಟ್ಟದಲ್ಲಿ ‘ಇಸಿಐನೆಟ್’ (ECINET) ವ್ಯವಸ್ಥೆಯಡಿ ಸುಮಾರು 13.2 ಕೋಟಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಮತ್ತು ಸಂಸತ್ತಿನ ಗಮನಕ್ಕೆ ತರದೆ ‘ಫಾರ್ಮ್ 6’ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮತ್ತೊಂದೆಡೆ, ಯುವಕರಿಂದ ರೂಪುಗೊಂಡಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರೂ, ಈ ರಾಜಕೀಯ ರ್ಯಾಲಿಯಿಂದ ದೂರ ಉಳಿದು ತನ್ನ ಸ್ವತಂತ್ರ ಗುರುತನ್ನು ಕಾಯ್ದುಕೊಳ್ಳುವುದಾಗಿ ತಿಳಿಸಿದೆ.
ಸಿಖ್ ದಂಗೆ ಸ್ಮರಿಸಿ ಬಿಜೆಪಿಯಿಂದ ರ್ಯಾಲಿ
ಇಂಡಿಯಾ ಮೈತ್ರಿಕೂಟದ ಪ್ರತಿಭಟನೆಯನ್ನು “ಮಹಾನಾಟಕ” ಎಂದು ಕರೆದಿರುವ ಬಿಜೆಪಿ, 1984ರ ಸಿಖ್ ವಿರೋಧಿ ದಂಗೆಯ ಕರಾಳ ದಿನಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಪಶ್ಚಿಮ ದೆಹಲಿಯ ಹರಿ ನಗರ ಬಸ್ ಡಿಪೋದಿಂದ ತಿಲಕ್ ನಗರ ಮೆಟ್ರೋ ನಿಲ್ದಾಣದವರೆಗೆ ಬಿಜೆಪಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವ ಹರ್ಷ್ ಮಲ್ಹೋತ್ರಾ, ಸಂಸದೆ ಬಾನ್ಸುರಿ ಸ್ವರಾಜ್ ಹಾಗೂ ಎಚ್.ಎಸ್. ಫೂಲ್ಕಾ ಈ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಂಗೆಯ ಸಂತ್ರಸ್ತ ಕುಟುಂಬಗಳ ಜೊತೆ ಸಂಸದ ವಿಕ್ರಮ್ಜಿತ್ ಸಿಂಗ್ ಸಾಹ್ನಿ ಮಾಧ್ಯಮಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಕಿ ಕಾವಲಿನಲ್ಲಿ ದೆಹಲಿ: 10,000 ಭದ್ರತಾ ಸಿಬ್ಬಂದಿ ನಿಯೋಜನೆ
ಎರಡೂ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ದೆಹಲಿ ಪೊಲೀಸರು ಹಾಗೂ ಸಿಆರ್ಪಿಎಫ್, ಕ್ಷಿಪ್ರ ಕಾರ್ಯಪಡೆ (ಆರ್ಎಎಫ್) ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸುಮಾರು 10,000 ಸಿಬ್ಬಂದಿಯನ್ನು ದೆಹಲಿಯಾದ್ಯಂತ ನಿಯೋಜಿಸಲಾಗಿದೆ.
ವಿಶೇಷವಾಗಿ ರಾಮ್ಲೀಲಾ ಮೈದಾನ, ಕನ್ನಾಟ್ ಪ್ಲೇಸ್, ಜಂತರ್ ಮಂತರ್, ಸುಪ್ರೀಂ ಕೋರ್ಟ್ ಹಾಗೂ ರಸ್ತೆಗಳ ಸುತ್ತಲೂ 4,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇಡೀ ಪ್ರದೇಶವನ್ನು 200ರಿಂದ 250 ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲಿನಲ್ಲಿ ಇರಿಸಲಾಗಿದೆ. ದೆಹಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.



















