ಬೆಂಗಳೂರು: ದೇಶದಲ್ಲಿ ಸಣ್ಣ ಟೀ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕೂಡ ಯುಪಿಐ ಪೇಮೆಂಟ್ ಮಾಡಬಹುದಾಗಿದೆ. ಹೆಚ್ಚಿನ ಜನರು ಯುಪಿಐ ಮೂಲಕವೇ ಹಣ ಪಾವತಿಸುತ್ತಾರೆ. ಇಷ್ಟಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ನೋಟುಗಳಲ್ಲೇ ವಹಿವಾಟು ನಡೆಸಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ನೋಟುಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ಇದರ ಬೆನ್ನಲ್ಲೇ, ದೇಶದಲ್ಲಿ ಕಾಗದದ ನೋಟುಗಳ ಬದಲಾಗಿ, ಪ್ಲಾಸ್ಟಿಕ್ ನೋಟುಗಳನ್ನು ಚಾಲ್ತಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳನ್ನು ಕಾಟನ್ ಫೈಬರ್ ಕಾಗದದಿಂದ ತಯಾರಿಸಲಾಗುತ್ತದೆ. ಆದರೆ ಆರ್ ಬಿಐ ಈಗ ವಿಶೇಷವಾದ ಪಾಲಿಮರ್ ಪ್ರೊಪಿಲಿನ್ ಎಂಬ ಪ್ಲಾಸ್ಟಿಕ್ ವಸ್ತುವನ್ನು ಬಳಸಿ ನೋಟುಗಳನ್ನು ಮುದ್ರಿಸಲು ಗಂಭೀರ ಚಿಂತನೆ ನಡೆಸುತ್ತಿದೆ. ಇದು ಕಾಗದದ ನೋಟುಗಳಂತೆಯೇ ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ.
ನಿರ್ಧಾರಕ್ಕೆ ಮುಖ್ಯ ಕಾರಣಗಳೇನು?
ಭಾರತದಲ್ಲಿ ನಗದು ಚಲಾವಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹರಿದು ಹೋದ ಅಥವಾ ಹಳೆಯದಾದ ಕಾಗದದ ನೋಟುಗಳನ್ನು ಬದಲಾಯಿಸಲು ಆರ್ ಬಿಐ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಮುದ್ರಣ ಮತ್ತು ಸಾಗಣೆಗೆ ವ್ಯಯಿಸಬೇಕಾಗುತ್ತದೆ. ಪ್ಲಾಸ್ಟಿಕ್ ನೋಟುಗಳು ದೀರ್ಘಕಾಲ ಬಾಳಿಕೆ ಬರುವುದರಿಂದ ಈ ವೆಚ್ಚ ಭಾರಿ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ.
ತಜ್ಞರ ಪ್ರಕಾರ, ಪ್ಲಾಸ್ಟಿಕ್ ನೋಟುಗಳು ಈಗಿರುವ ಕಾಗದದ ನೋಟುಗಳಿಗಿಂತ 3 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇವು ಸುಲಭವಾಗಿ ಹರಿಯುವುದಿಲ್ಲ ಮತ್ತು ಮಡಚಿದರೂ ಹಾಳಾಗುವುದಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ, ಆರ್ ಬಿಐ ಪ್ಲಾಸ್ಟಿಕ್ ನೋಟುಗಳನ್ನು ಮುದ್ರಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಪ್ಲಾಸ್ಟಿಕ್ ನೋಟುಗಳು ಇವು ಸಂಪೂರ್ಣವಾಗಿ ವಾಟರ್ ಪ್ರೂಫ್ ಆಗಿರುತ್ತವೆ. ಕಾಗದದ ನೋಟುಗಳಂತೆ ಇವು ಧೂಳು, ಜಿಡ್ಡು ಹಾಗೂ ಬೆವರನ್ನು ಹೀರಿಕೊಳ್ಳುವುದಿಲ್ಲ. ಇವುಗಳನ್ನು ನಕಲು ಮಾಡಲು ಕೂಡ ಆಗುವುದಿಲ್ಲ ಎಂದು ವರದಿಗಳು ತಿಳಿಸಿವೆ.



















