ಬೀದರ್ : ಜಿಲ್ಲೆಯ ಚಿಟಗುಪ್ಪ ತಾಲೂಕಿನಲ್ಲಿ ಅಕ್ರಮವಾಗಿ ಹೊರ ರಾಜ್ಯಕ್ಕೆ ಬಯೋಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ನ್ನು ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಡೀಸೆಲ್ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ.
ತಹಶೀಲ್ದಾರ್ ಮಂಜುನಾಥ್ ಪಂಚಾಳ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪಿಎಸ್ಐ ಸವಿತಾ ಹಾಗೂ ಆಹಾರ ನಿರೀಕ್ಷಕಿ ಪ್ರಿಯಾಂಕ ನೇತೃತ್ವದ ತಂಡ ಬೆಂಬಳಖೇಡಾ-ಬಂಗೂರ್ ರಸ್ತೆಯಲ್ಲಿ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ಡೀಸೆಲ್ ಸಾಗಾಟ ಮಾಡಲಾಗುತ್ತಿದ್ದ ಟ್ಯಾಂಕರ್‌ನ್ನು ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪರಿಶೀಲನೆ ವೇಳೆ ಸುಮಾರು 6 ಸಾವಿರ ಲೀಟರ್ ಬಯೋಡೀಸೆಲ್ ಪತ್ತೆಯಾಗಿದ್ದು, ಟ್ಯಾಂಕರ್ ಸೇರಿ ಒಟ್ಟು ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹುಮ್ನಾಬಾದ್ ಭಾಗದಿಂದ ತೆಲಂಗಾಣ ರಾಜ್ಯಕ್ಕೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಡೀಸೆಲ್ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಕಾರ್ಯಾಚರಣೆ ವೇಳೆ ಆರೋಪಿಯನ್ನು ಬಂಧಿಸಿರುವ ಅಧಿಕಾರಿಗಳು, ಅಕ್ರಮ ಸಾಗಾಟದ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಇದನ್ನೂ ಓದಿ ; ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆಯನ್ನು ರಕ್ಷಿಸಿದ ಪೊಲೀಸರು.. ವಿಡಿಯೋ ವೈರಲ್!



















