ಮೈಸೂರು : ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಅಕ್ರಮ ಬೀಟೆ ಮರ ಸಾಗಾಟ ಪ್ರಕರಣವನ್ನು ಅರಣ್ಯ ಇಲಾಖೆ ಭೇದಿಸಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ 45 ಬೀಟೆ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಆರೋಪಿ ಅಬ್ದುಲ್ ಶುಕೂರ್‌ನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಲಾರಿಯನ್ನೂ ಜಪ್ತಿ ಮಾಡಲಾಗಿದೆ. ಕೊಡಗಿನ ವಿವಿಧ ಭಾಗಗಳಿಂದ ಬೀಟೆ ಮರಗಳನ್ನು ಖರೀದಿಸಿ ಎಚ್.ಡಿ.ಕೋಟೆ ಮೂಲಕ ಬೆಂಗಳೂರು ಕಡೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಕಾಫಿ ಮೂಟೆಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನು ಅಡಗಿಸಿ ಸಾಗಿಸಲಾಗುತ್ತಿತ್ತು. ಹುಣಸೂರು ಆಜಾದ್ ನಗರ ಪೆಟ್ರೋಲ್ ಬಂಕ್ ಬಳಿ ಲಾರಿಯನ್ನು ಅಡ್ಡಗಟ್ಟಿದ ಅರಣ್ಯಾಧಿಕಾರಿಗಳ ತಂಡ ದಿಢೀರ್ ಕಾರ್ಯಾಚರಣೆ ನಡೆಸಿ ಅಕ್ರಮ ಸಾಗಾಟವನ್ನು ಪತ್ತೆಹಚ್ಚಿದೆ.
ಪ್ರಕರಣದಲ್ಲಿ ಬಳಸಲಾಗಿದ್ದ ಮೊಬೈಲ್ ಫೋನ್ ಕೂಡ ಜಪ್ತಿ ಮಾಡಲಾಗಿದ್ದು, ಆರೋಪಿಯಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಅಕ್ರಮ ಮರ ಸಾಗಾಟದ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದ್ದು, “ಕಿಂಗ್‌ಪಿನ್” ಪತ್ತೆಗೆ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.
ಕೇರಳ ನೋಂದಣಿ ಲಾರಿ ಬಳಕೆ ಮಾಡಿದರೆ ಅನುಮಾನ ಬರುವ ಸಾಧ್ಯತೆ ಇರುವುದರಿಂದ, ಆರೋಪಿಗಳು ಕರ್ನಾಟಕ ನೋಂದಣಿ ಹೊಂದಿದ ಲಾರಿಯನ್ನು ಬಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಎರಡು ತಿಂಗಳ ಹಿಂದಷ್ಟೇ ಸೆಕೆಂಡ್ ಹ್ಯಾಂಡ್ ಲಾರಿಯನ್ನು ಖರೀದಿಸಿ ಈ ಕೃತ್ಯಕ್ಕೆ ಬಳಸಲಾಗುತ್ತಿತ್ತು ಎನ್ನಲಾಗಿದೆ.
ಹುಣಸೂರು ಆರ್‌ಎಫ್‌ಓ ಸಂತೋಷ್ ಎಂ. ಹೂಗಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಬಾಕ್ಸಿಂಗ್ ಕೋಚ್‌ನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ? FIR ದಾಖಲು


















