ಹೈದರಾಬಾದ್ : ಹೈದರಾಬಾದ್‌ನ ಹುಸೇನ್ ಸಾಗರ ಕೆರೆಗೆ ಹಾರಿ 36 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ಅನೈತಿಕ ಸಂಬಂಧದಿಂದ ಉಂಟಾದ ತೀವ್ರ ಮಾನಸಿಕ ಖಿನ್ನತೆಯೇ ಈ ದುರಂತಕ್ಕೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಟೆಕ್ಕಿಯನ್ನು ಎಸ್. ಸೀತಾರಾಮ್ ರೆಡ್ಡಿ (36) ಎಂದು ಗುರುತಿಸಲಾಗಿದೆ. ಸೀತಾರಾಮ್ ರೆಡ್ಡಿ ಅವರು 2018ರಲ್ಲಿ ರೇಣುಕಾ ಎಂಬುವವರನ್ನು ವಿವಾಹವಾಗಿದ್ದು, ದಂಪತಿಗೆ ಐದು ಮತ್ತು ಏಳು ವರ್ಷದ ಇಬ್ಬರು ಮಕ್ಕಳಿದ್ದಾರೆ.
ಆದರೆ, ರೇಣುಕಾ ಅವರು ಎಂ. ರಮಣ ರೆಡ್ಡಿ ಎಂಬ ಉದ್ಯಮಿಯೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿಯ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹ ವಿಕೋಪಕ್ಕೆ ಹೋಗಿ, ಕಳೆದ ಜನವರಿಯಲ್ಲಿ ರೇಣುಕಾ ಮನೆಯಿಂದ ಹೊರನಡೆದಿದ್ದರು. ಈ ವೇಳೆ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಸೀತಾರಾಮ್ ರೆಡ್ಡಿ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು.
ಖಾಸಗಿ ವಿಡಿಯೋ ನೋಡಿ ಕಂಗೆಟ್ಟಿದ್ದ ಸೀತಾರಾಮ್
ತಮ್ಮ ಪುತ್ರನ ಸಾವಿಗೆ ಸೊಸೆಯ ಅಕ್ರಮ ಸಂಬಂಧವೇ ನೇರ ಕಾರಣ ಎಂದು ಸೀತಾರಾಮ್ ಅವರ ತಂದೆ ವೆಂಕಟೇಶ್ವರ್ ಆರೋಪಿಸಿದ್ದಾರೆ. ಪತ್ನಿಯ ನಡವಳಿಕೆಯಿಂದ ಸೀತಾರಾಮ್ ಮೊದಲೇ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಇದರ ನಡುವೆ, ಪತ್ನಿಗೆ ಸಂಬಂಧಿಸಿದ ಖಾಸಗಿ ವಿಡಿಯೋವೊಂದು ಸೀತಾರಾಮ್ ಅವರಿಗೆ ತಲುಪಿತ್ತು. ಇದನ್ನು ನೋಡಿ ತೀವ್ರವಾಗಿ ನೊಂದ ಅವರು ಫೆಬ್ರವರಿ 9ರಂದು ಹುಸೇನ್ ಸಾಗರ ಕೆರೆಗೆ ಹಾರಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಜೈಲು ಪಾಲಾದ ಆರೋಪಿಗಳು
ಸೀತಾರಾಮ್ ರೆಡ್ಡಿ ಅವರ ಸಾವಿನ ಬಳಿಕ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಮೊದಲು ‘ಜೀರೋ ಎಫ್‌ಐಆರ್’ ದಾಖಲಿಸಿಕೊಂಡಿದ್ದರು. ಬಳಿಕ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬಾಚುಪಲ್ಲಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ತನಿಖೆಯ ವೇಳೆ ರೇಣುಕಾ ಮತ್ತು ರಮಣ ರೆಡ್ಡಿ ಅವರ ನಡುವಿನ ಅಕ್ರಮ ಸಂಬಂಧ ಮತ್ತು ಸೀತಾರಾಮ್ ಅವರ ಮೇಲಿದ್ದ ಮಾನಸಿಕ ಒತ್ತಡದ ಅಂಶಗಳು ಪೊಲೀಸರ ವಿಚಾರಣೆಯಲ್ಲಿ ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಏಪ್ರಿಲ್ 21ರಂದು ರೇಣುಕಾ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ಜಮ್ಮು-ಶ್ರೀನಗರ ವಂದೇ ಭಾರತ್ ರೈಲಿಗೆ ಕಾವಲು ನಿಂತಿರುವ ‘ಕೋರಸ್’ ಕಮಾಂಡೋಗಳು ಯಾರು?



















