ಬೆಂಗಳೂರು : ಭಾರತ ಕ್ರಿಕೆಟ್ ತಂಡದ ದಿಗ್ಗಜ ಹಾಗೂ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪರ ಧ್ವನಿ ಎತ್ತಿದ್ದಾರೆ. ಪ್ರಸ್ತುತ ಜೈಲುವಾಸ ಅನುಭವಿಸುತ್ತಿರುವ ಇಮ್ರಾನ್ ಖಾನ್ ಅವರಿಗೆ ಅತ್ಯುತ್ತಮ ವೈದ್ಯಕೀಯ ನೆರವು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಮ್ರಾನ್ ಖಾನ್ ಅವರನ್ನು ಮಾನವೀಯತೆಯ ಆಧಾರದ ಮೇಲೆ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು ಎನ್ನುವುದು ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರ ಪ್ರಮುಖ ಕಾಳಜಿಯಾಗಿದೆ.
ದೆಹಲಿಯಲ್ಲಿ ನಡೆದ ಡಿಪಿ ವರ್ಲ್ಡ್ ಇಂಡಿಯಾ ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭದ ನೇಪಥ್ಯದಲ್ಲಿ ಮಾತನಾಡಿದ ಕಪಿಲ್ ದೇವ್ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ಪಾಕಿಸ್ತಾನದ ಕಾನೂನು ಮತ್ತು ನಿಯಮಗಳು ಹೇಗಿವೆ ಎಂಬುದು ನಮಗೆ ತಿಳಿದಿಲ್ಲ, ಆದರೆ ಭ್ರಷ್ಟಾಚಾರ ಮತ್ತಿತರ ಆರೋಪಗಳ ಮೇಲೆ ಜೈಲಿನಲ್ಲಿರುವ ಕೈದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಕನಿಷ್ಠ ಮಾನವೀಯತೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಮ್ರಾನ್ ಖಾನ್ ಕೇವಲ ಒಬ್ಬ ಸಾಮಾನ್ಯ ಕೈದಿಯಲ್ಲ, ಅವರು ದೇಶದ ಮಾಜಿ ಪ್ರಧಾನಿಯಾಗಿ ಹಾಗೂ ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಸೇವೆ ಸಲ್ಲಿಸಿದವರು. ಹೀಗಾಗಿ ಅವರಿಗೆ ಗೌರವಯುತವಾದ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಸಿಗಲೇಬೇಕು. ಇದಕ್ಕಾಗಿ ನಾವು ಯಾವುದೇ ಉತ್ತರವನ್ನು ನಿರೀಕ್ಷಿಸುತ್ತಿಲ್ಲ ಕೇವಲ ಕಳಕಳಿಯ ವಿನಂತಿ ಮಾಡುತ್ತಿದ್ದೇವೆ ಎಂದು ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.
ಹಳೆಯ ಸ್ನೇಹಿತನಿಗೆ ನನ್ನ ಬೆಂಬಲ
ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದ ವಾಸಿಂ ಅಕ್ರಮ್ ಹಾಗೂ ವಕಾರ್ ಯೂನಿಸ್ ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ಕ್ರಿಕೆಟಿಗರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಮಾತನಾಡಿದ ಕಪಿಲ್ ದೇವ್, ಪಾಕಿಸ್ತಾನದ ಆಟಗಾರರನ್ನು ದೂರುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವರು ಅದೇ ದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿರಬೇಕಾಗುತ್ತದೆ ಎಂದರು. ಆದರೆ ಹೊರಗಿನಿಂದ ನಾವು ನಮ್ಮ ಹಳೆಯ ಸ್ನೇಹಿತನನ್ನು ಬೆಂಬಲಿಸುತ್ತೇವೆ. ನಾವು ಒಟ್ಟಿಗೆ ಆಡಿದ್ದೇವೆ ಹಾಗೂ ಅವರ ಕ್ರಿಕೆಟ್ ಕೌಶಲ್ಯವನ್ನು ನಾವು ಸದಾ ಗೌರವಿಸುತ್ತೇವೆ. ಹೀಗಾಗಿ ಅವರ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಅಭಿಮಾನದಿಂದ ನುಡಿದರು.
22 ದಿಗ್ಗಜರಿಂದ ಪಾಕಿಸ್ತಾನ ಪ್ರಧಾನಿಗೆ ಪತ್ರ
ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿದವರ ಪೈಕಿ ಕಪಿಲ್ ದೇವ್ ಒಬ್ಬರೇ ಅಲ್ಲ. ಭಾರತದ ಸುನೀಲ್ ಗವಾಸ್ಕರ್ ಅವರನ್ನೊಳಗೊಂಡಂತೆ ವಿಶ್ವ ಕ್ರಿಕೆಟ್‌ನ 22 ಮಂದಿ ಮಾಜಿ ನಾಯಕರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಕಳೆದ ಆರು ತಿಂಗಳಲ್ಲಿ ಎರಡನೇ ಬಾರಿ ಪತ್ರ ಬರೆದಿದ್ದಾರೆ. ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಅಲಾನ್ ಬಾರ್ಡರ್, ಕ್ಲೈವ್ ಲಾಯ್ಡ್, ಅರ್ಜುನ ರಣತುಂಗ, ಸ್ಟೀವ್ ವಾ ಅವರಂತಹ ಘಟಾನುಘಟಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜೈಸ್ವಾಲ್-ಫರ್ನಾಂಡೊ ವಾಗ್ವಾದದ ಬಗೆಗೂ ಪ್ರತಿಕ್ರಿಯೆ
ಶ್ರೀಲಂಕಾ ವಿರುದ್ಧದ ಕೊಲಂಬೊ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತದ ಯಶಸ್ವಿ ಜೈಸ್ವಾಲ್ ಹಾಗೂ ಲಂಕಾದ ವೇಗಿ ಅಸಿತಾ ಫರ್ನಾಂಡೊ ನಡುವೆ ನಡೆದ ವಾಗ್ವಾದದ ಬಗ್ಗೆಯೂ ಕಪಿಲ್ ದೇವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಟದ ಭರದಲ್ಲಿ ಇಂತಹ ಘಟನೆಗಳು ಸಾಮಾನ್ಯ, ಅದನ್ನು ಅಲ್ಲೇ ಬಿಟ್ಟು ಮುಂದೆ ಸಾಗಬೇಕು. ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ವ್ಯಕ್ತಿತ್ವ ಹಾಗೂ ಆಟದ ಶೈಲಿ ಇರುತ್ತದೆ. ಆದರೆ ಆಟಗಾರರು ಎಲ್ಲೇ ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಕ್ರಿಕೆಟ್ ಮಂಡಳಿಗಳ ಮೇಲಿದೆ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ : ಮುಂಬೈನಲ್ಲಿ ಮರಾಠಿ ಪ್ರಶ್ನೆಗಳ ಭೀತಿ : ಆಟೋ, ಟ್ಯಾಕ್ಸಿಗಳ ಮುಷ್ಕರ.. ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು!



















