ಬೆಂಗಳೂರು : ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಕೊಲಂಬೊ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅವರು ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಅವರ ತಾಳ್ಮೆ ಹಾಗೂ ಮತ್ತು ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡವು ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಆಡಿದ ಜುರೆಲ್, 115 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕವನ್ನು ದಾಖಲಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಶತಕ ಪೂರೈಸಿದ ತಕ್ಷಣ ಧ್ರುವ್ ಜುರೆಲ್ ಅವರು ಮೈದಾನದಲ್ಲಿ ಮಾಡಿದ ವಿಶೇಷ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆಯಿತು. ಬ್ಯಾಟ್ ಮೇಲೆತ್ತಿ ಸೆಲ್ಯೂಟ್ ಹೊಡೆದ ಅವರು, ತಮ್ಮ ಬೈಸೆಪ್ಸ್ ಪ್ರದರ್ಶಿಸುವ ಮೂಲಕ ಅದರ ಮೇಲಿದ್ದ ‘ಜೈ ಜವಾನ್, ಜೈ ಕಿಸಾನ್’ ಎಂಬ ಟ್ಯಾಟೂವನ್ನು ಅಭಿಮಾನಿಗಳಿಗೆ ತೋರಿಸಿದರು. ಈ ಬಗ್ಗೆ ದಿನದಾಟದ ಅಂತ್ಯದಲ್ಲಿ ಮಾತನಾಡಿದ ಅವರು, ಈ ಸಂಭ್ರಮಾಚರಣೆಯನ್ನು ತಮ್ಮ ತಂದೆ ಹಾಗೂ ಅಜ್ಜನಿಗೆ ಅರ್ಪಿಸಿದ್ದಾರೆ. ತಮ್ಮ ಅಜ್ಜ ರೈತನಾಗಿದ್ದರು ಮತ್ತು ತಂದೆ ಯೋಧರಾಗಿದ್ದರು ಎಂಬುದನ್ನು ನೆನಪಿಸಿಕೊಂಡ ಅವರು, ತಮ್ಮ ಕುಟುಂಬದ ಬೇರುಗಳನ್ನು ಎಂದಿಗೂ ಮರೆಯಲು ಬಯಸುವುದಿಲ್ಲ ಎಂದು ಭಾವುಕರಾಗಿ ನುಡಿದರು.
ರಿಷಬ್ ಪಂತ್ ಜೊತೆಗಿನ ಅದ್ಭುತ ಜೊತೆಯಾಟ
ಪಂದ್ಯದ ಇನ್ನೊಂದು ಪ್ರಮುಖ ಹೈಲೈಟ್ ಎಂದರೆ ಧ್ರುವ್ ಜುರೆಲ್ ಮತ್ತು ರಿಷಬ್ ಪಂತ್ ನಡುವಿನ ಜೊತೆಯಾಟ. ಒಂದು ಕಡೆ ಪಂತ್ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸಿ 63 ರನ್ ಗಳಿಸಿದರೆ, ಜುರೆಲ್ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಬಹಳ ತಾಳ್ಮೆಯಿಂದ ಕ್ರೀಸ್ ಕಚ್ಚಿ ನಿಂತರು. ಇವರಿಬ್ಬರೂ ಸೇರಿ ಪ್ರಮುಖ 112 ರನ್‌ಗಳ ಜೊತೆಯಾಟವನ್ನು ಕಟ್ಟಿದರು. ರಿಷಬ್ ಪಂತ್ ಅವರಂತಹ ಅನುಭವಿ ಆಟಗಾರರೊಂದಿಗೆ ಬ್ಯಾಟ್ ಮಾಡುವುದು ಅದ್ಭುತ ಅನುಭವ ಎಂದು ಹೇಳಿರುವ ಜುರೆಲ್, ಪರಿಸ್ಥಿತಿಗೆ ತಕ್ಕಂತೆ ಯಾವ ರೀತಿ ಆಡಬೇಕು ಎಂಬುದರ ಕುರಿತು ಅವರಿಂದ ಅಮೂಲ್ಯ ಸಲಹೆಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಮೊಹಮ್ಮದ್ ಸಿರಾಜ್ ಅವರು ಯಾವುದೇ ರನ್ ಗಳಿಸದಿದ್ದರೂ 29 ಎಸೆತಗಳನ್ನು ಎದುರಿಸಿ ತಮಗೆ ಉತ್ತಮ ಬೆಂಬಲ ನೀಡಿದ್ದನ್ನೂ ಜುರೆಲ್ ಸ್ಮರಿಸಿದ್ದಾರೆ.
ಪಂದ್ಯದಲ್ಲಿ ಭಾರತದ ಬಿಗಿ ಹಿಡಿತ
ಜುರೆಲ್ ಅವರ ಈ ಅಮೋಘ ಶತಕದ ನೆರವಿನಿಂದ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 503 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಎರಡನೇ ದಿನದಂತ್ಯಕ್ಕೆ ಕೇವಲ 8 ರನ್ ಗಳಿಸುವಷ್ಟರಲ್ಲಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ತಲಾ ಒಂದೊಂದು ವಿಕೆಟ್ ಪಡೆದು ಲಂಕಾ ಪಡೆಗೆ ಆಘಾತ ನೀಡಿದರು. ಸದ್ಯ ಶ್ರೀಲಂಕಾ ತಂಡವು ಭಾರತದ ಮೊತ್ತಕ್ಕಿಂತ ಇನ್ನೂ 495 ರನ್‌ಗಳ ಹಿನ್ನಡೆಯಲ್ಲಿದ್ದು, ಪಂದ್ಯದ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ.
ಇದನ್ನೂ ಓದಿ : ಕೊಲಂಬೊ ಟೆಸ್ಟ್ : ಜುರೆಲ್ ಶತಕ ಹಾಗೂ ಪಂತ್ ಸಿಡಿಲಬ್ಬರದ ಬ್ಯಾಟಿಂಗ್.. ಭದ್ರ ಸ್ಥಿತಿಯಲ್ಲಿ ಟೀಮ್ ಇಂಡಿಯಾ



















