ಕಲಬುರಗಿ : ಕಲಬುರಗಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ನವ ವಿವಾಹಿತನೊಬ್ಬ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರ್ಗಿ ನಗರದ ಹೊರ ವಲಯದ ಸೇಡಂ ರಸ್ತೆಯ ಬ್ರಹ್ಮ ಕುಮಾರಿ ಸಮೀಪ ಈ ದಾರುಣ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ದಿನೇಶ್ ಕಮ್ಮನಕರ್ (25) ಹಾಗೂ ಸಿದ್ದಣ (24) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ನೇಹಿತರಾಗಿದ್ದು, ಪಾರ್ಟಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ವೇಗವಾಗಿ ಬರುತ್ತಿದ್ದ ಬೈಕ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ದಿನೇಶ್ ಕಮ್ಮನಕರ್ ಅವರಿಗೆ ಕೇವಲ 15 ದಿನಗಳ ಹಿಂದಷ್ಟೇ ಮದುವೆಯಾಗಿತ್ತು ಎನ್ನುವ ಮಾಹಿತಿ ಹೊರಬಂದಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಹೊಸ ಜೀವನ ಆರಂಭಿಸಿದ್ದ ಯುವಕನ ದುರ್ಮರಣ ಸಂಬಂಧಿಕರು ಮತ್ತು ಸ್ನೇಹಿತರಲ್ಲಿ ಶೋಕಕ್ಕೆ ದೂಡಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಅಳವಡಿಕೆ – ವಾರದಲ್ಲಿ ದಾಖಲಾಯ್ತು 46,753 ಪ್ರಕರಣ!



















