ಬೆಂಗಳೂರು: ತನ್ನ ಜನಪ್ರಿಯ ಎಸ್‌ಯುವಿ ಎಲಿವೇಟ್‌ಗೆ ಸ್ಪೋರ್ಟಿ ಮತ್ತು ಅಡ್ವೆಂಚರ್ ಲುಕ್ ನೀಡಿರುವ ಹೋಂಡಾ, ಹೊಸ ‘ಎಡಿವಿ ಎಡಿಷನ್’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಯುವ ಮತ್ತು ಸಾಹಸ ಪ್ರಿಯ ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಈ ಹೊಸ ಮಾಡೆಲ್, ವಿನ್ಯಾಸ ಮತ್ತು ಫೀಚರ್‌ಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ.
ನವದೆಹಲಿ: ಭಾರತದ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೋಂಡಾ ಎಲಿವೇಟ್, ಇದೀಗ ಹೊಸ, ಸ್ಪೋರ್ಟಿ ಅವತಾರದಲ್ಲಿ ಕಣಕ್ಕಿಳಿದಿದೆ. ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ತನ್ನ ಜನಪ್ರಿಯ ಎಲಿವೇಟ್ ಎಸ್‌ಯುವಿಯ ಹೊಚ್ಚ ಹೊಸ “ಎಲಿವೇಟ್ ಎಡಿವಿ ಎಡಿಷನ್” ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ 15,29,000 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ಹೊಸ ಅವತಾರದಲ್ಲಿ ಹೊರನೋಟದ ವೈಶಿಷ್ಟ್ಯಗಳೇನು?

ಹೊಸ ಎಡಿವಿ ಎಡಿಷನ್, ತನ್ನ ವಿನ್ಯಾಸದಿಂದಲೇ ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯುವುದು ಖಚಿತ. ಕಾರಿನ ಮುಂಭಾಗದಲ್ಲಿ ಹೊಳಪಿನ ಕಪ್ಪು ಬಣ್ಣದ ಆಲ್ಫಾ-ಬೋಲ್ಡ್ ಪ್ಲಸ್ ಗ್ರಿಲ್ ನೀಡಲಾಗಿದ್ದು, ಅದರ ಮೇಲೆ ಆಕರ್ಷಕ ಕಿತ್ತಳೆ (ಆರೆಂಜ್) ಬಣ್ಣದ ಹೈಲೈಟ್‌ಗಳು ಮತ್ತು ಹೂಡ್ ಡೆಕಾಲ್ ಇದನ್ನು ಸಾಮಾನ್ಯ ಎಲಿವೇಟ್‌ಗಿಂತ ವಿಭಿನ್ನವಾಗಿಸಿದೆ. ಕಪ್ಪು ಬಣ್ಣದ ರೂಫ್ ರೈಲ್ಸ್, ಡೋರ್ ಹ್ಯಾಂಡಲ್‌ಗಳು, ORVMಗಳು, ಮತ್ತು ಶಾರ್ಕ್ ಫಿನ್ ಆಂಟೆನಾ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿವೆ. ಅಲ್ಲದೆ, ಫೆಂಡರ್‌ಗಳ ಮೇಲೆ ‘ADV’ ಲಾಂಛನ , ಫಾಗ್ ಲ್ಯಾಂಪ್‌ಗಳ ಸುತ್ತ ಕಿತ್ತಳೆ ಬಣ್ಣದ ಅಲಂಕಾರ, ಮತ್ತು ಕಪ್ಪು ಬಣ್ಣದ ಅಲಾಯ್ ವೀಲ್‌ಗಳ ಮೇಲೆ ಕಿತ್ತಳೆ ಬಣ್ಣದ ಸ್ಪರ್ಶವು ಇದರ ಅಂದವನ್ನು ಹೆಚ್ಚಿಸಿದೆ. ಇದನ್ನೂ ಓದಿ: ಡಿಸೆಂಬರ್ 2ಕ್ಕೆ ಮಾರುತಿ ಸುಜುಕಿ ಇ-ವಿಟಾರಾ ಬಿಡುಗಡೆ : ಭಾರತದ EV ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ?
ಒಳಾಂಗಣ ವಿನ್ಯಾಸ: ಸ್ಪೋರ್ಟಿ ಲುಕ್ ಮತ್ತು ಹೊಸ ತಂತ್ರಜ್ಞಾನ
ಕಾರಿನ ಒಳಭಾಗವು ಸಂಪೂರ್ಣ ಕಪ್ಪು ಬಣ್ಣದ ಥೀಮ್ ಹೊಂದಿದ್ದು, ಸೀಟ್‌ಗಳು, ಗೇರ್ ನಾಬ್ ಮತ್ತು ಡೋರ್ ಟ್ರಿಮ್‌ಗಳ ಮೇಲೆ ಕಿತ್ತಳೆ ಬಣ್ಣದ ಹೊಲಿಗೆಗಳು ಮತ್ತು ಹೈಲೈಟ್‌ಗಳನ್ನು ನೀಡಲಾಗಿದೆ. ಸೀಟ್‌ಗಳ ಮೇಲೆ ‘ADV’ ಲೋಗೋವನ್ನು ಕೂಡ ಮುದ್ರಿಸಲಾಗಿದೆ. ಇದರ ಪ್ರಮುಖ ಆಕರ್ಷಣೆ ಎಂದರೆ, ಹೋಂಡಾದಲ್ಲೇ ಮೊದಲ ಬಾರಿಗೆ ಪರಿಚಯಿಸಲಾಗಿರುವ “ADV ಟೆರೈನ್ ಪ್ಯಾಟರ್ನ್ ಬ್ಯಾಕ್‌ಲಿಟ್ ಇಲ್ಯೂಮಿನೇಟೆಡ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಗಾರ್ನಿಶ್” . ಇದು ಒಂದು ವಿಶೇಷ ಆಂಬಿಯೆಂಟ್ ಲೈಟಿಂಗ್ ಆಗಿದ್ದು, ರಾತ್ರಿ ವೇಳೆ ಕ್ಯಾಬಿನ್‌ಗೆ ಹೊಸ ರೂಪ ನೀಡುತ್ತದೆ.
ಎಂಜಿನ್ ಸಾಮರ್ಥ್ಯ ಮತ್ತು ಸುರಕ್ಷತಾ ವೈಶಿಷ್ಟ್ಯಗಳು
ಈ ಹೊಸ ಆವೃತ್ತಿಯಲ್ಲಿ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಹೋಂಡಾದ ವಿಶ್ವಾಸಾರ್ಹ 1.5-ಲೀಟರ್ i-VTEC ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಟೆಪ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೋಂಡಾದ “SENSING” ಎಂಬ ಅಡ್ವಾನ್ಸ್ಡ್ ಡ್ರೈವರ್-ಅಸಿಸ್ಟ್ ಸಿಸ್ಟಮ್ (ADAS) ಅನ್ನು ಇದು ಒಳಗೊಂಡಿದೆ. ಇದರಲ್ಲಿ ಕೊಲಿಷನ್ ಮಿಟಿಗೇಶನ್ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಹಲವು ಫೀಚರ್‌ಗಳಿವೆ. ಜೊತೆಗೆ 6 ಏರ್‌ಬ್ಯಾಗ್‌ಗಳು ಮತ್ತು ಲೇನ್ ವಾಚ್ ಕ್ಯಾಮೆರಾದಂತಹ ಸೌಲಭ್ಯಗಳೂ ಇವೆ.
ಬೆಲೆ ಮತ್ತು ವೇರಿಯೆಂಟ್‌ಗಳ ವಿವರ

ಎಲಿವೇಟ್ ಎಡಿವಿ ಎಡಿಷನ್, ಮೆಟಿಯೊರೈಡ್ ಗ್ರೇ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದರ ಎಕ್ಸ್-ಶೋರೂಂ (ದೆಹಲಿ) ಬೆಲೆಗಳು ಹೀಗಿವೆ: ಸಿಂಗಲ್ ಟೋನ್ ಮ್ಯಾನುವಲ್ (MT) ಮಾದರಿಯ ಬೆಲೆ 15,29,000 ರೂಪಾಯಿಗಳಾದರೆ, ಡ್ಯುಯಲ್ ಟೋನ್ ಮ್ಯಾನುವಲ್ (MT) ಮಾದರಿಯ ಬೆಲೆ 15,49,000 ರೂಪಾಯಿ ಆಗಿದೆ. ಇನ್ನು, ಸಿಂಗಲ್ ಟೋನ್ ಸಿವಿಟಿ (CVT) ಮಾದರಿಯು 16,46,800 ರೂಪಾಯಿಗಳಿಗೆ ಮತ್ತು ಡ್ಯುಯಲ್ ಟೋನ್ ಸಿವಿಟಿ (CVT) ಮಾದರಿಯು 16,66,800 ರೂಪಾಯಿಗಳಿಗೆ ಲಭ್ಯವಿದೆ.
ವಾರಂಟಿ ಮತ್ತು ಹೆಚ್ಚುವರಿ ಸೌಲಭ್ಯಗಳು
ಈ ಕಾರಿಗೆ 3 ವರ್ಷಗಳ ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ಹೋಂಡಾ ನೀಡುತ್ತಿದ್ದು, ಇದನ್ನು 10 ವರ್ಷಗಳವರೆಗೆ ವಿಸ್ತರಿಸುವ ಆಯ್ಕೆಯೂ ಇದೆ. ಹೆಚ್ಚುವರಿ ಶುಲ್ಕ ಪಾವತಿಸಿ, 360-ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾವನ್ನು ಡೀಲರ್‌ಶಿಪ್‌ನಲ್ಲಿ ಅಳವಡಿಸಿಕೊಳ್ಳುವ ಅವಕಾಶವನ್ನೂ ಸಹ ನೀಡಲಾಗಿದೆ.



















