ಬೆಂಗಳೂರು : ವಿಧಾನಸಭೆ (ಆ.17ರಂದು) ಕಲಾಪ ಆರಂಭ ಆಗ್ತಿದ್ದಂತೆ ಇಂದು ಹನೂರು ಶೂಟೌಟ್ ಪ್ರಕರಣ ಸದ್ದು ಮಾಡಿದೆ. ಸರ್ಕಾರ ಮೂರು ಜನರನ್ನು ಕೊಲೆ ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದು, ಮೂವರು ಬೇಟೆಗಾರರ ಎನ್‌ಕೌಂಟರ್ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್. ಅಶೋಕ್ , ʻಮೂವರು ಸತ್ತಿದ್ದಾರೆ, ಸರ್ಕಾರ ಸ್ಪಷ್ಟನೆ ಕೊಡಬೇಕುʼ ಎಂದು ಒತ್ತಾಯಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಕೂಡ ಘಟನೆ ಕುರಿತು ಮಾತನಾಡಿದ್ದಾರೆ. ರಾಜ್ಯದಲ್ಲಿ ತಮಿಳಿಗರಿಗೆ ರಕ್ಷಣೆ ಇಲ್ಲ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಸ್ಪಷ್ಟನೆ ನೀಡಬೇಕು ಎಂದು ಗುಡುಗಿದರು.
ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್, ಮೊದಲು ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ನೀಡಬೇಕು. ಬಳಿಕ ಪ್ರಕರಣದ ಕುರಿತು ಚರ್ಚೆಗೆ ನಿಲುವಳಿ ಸೂಚನೆ ನೀಡುವಂತೆ ಸಲಹೆ ನೀಡಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ʻಸರ್ಕಾರ ಘಟನೆ ಬಗ್ಗೆ ಸ್ವಯಂಪ್ರೇರಿತ ಹೇಳಿಕೆ ನೀಡುತ್ತದೆ ಎಂದುಕೊಂಡಿದ್ದೆವು. ಸರ್ಕಾರ ಹೇಳಿಕೆ ನೀಡದ ಹಿನ್ನೆಲೆಯಲ್ಲಿ ನಾವೇ ವಿಷಯ ಪ್ರಸ್ತಾಪಿಸಿದ್ದೇವೆʼ ಎಂದು ಹೇಳಿದರು.
ಪರಮೇಶ್ವರ್ ಅವರ ಮಾತಿಗೆ ತಿರುಗೇಟು ನೀಡಿದ ಸುನೀಲ್ ಕುಮಾರ್, ʻಚರ್ಚೆಗೆ ನೋಟಿಸ್ ಕೊಡಿ ಅಂತಿದ್ದೀರಲ್ಲ, ಎನ್‌ಕೌಂಟರ್ ಮಾಡುವ ಮುನ್ನ ಸತ್ತವರಿಗೆ ನೋಟಿಸ್ ಕೊಟ್ಟಿದ್ದೀರಾ?ʼ ಎಂದು ಪ್ರಶ್ನಿಸಿದರು. ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸರ್ಕಾರದಿಂದ ಸದನದಲ್ಲಿ ಸ್ಪಷ್ಟನೆ
ವಿಪಕ್ಷಗಳ ನಿರಂತರ ಆಗ್ರಹದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ಕುರಿತು ಸದನದಲ್ಲಿ ಸ್ಪಷ್ಟನೆ ನೀಡಿತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಹನೂರು ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನ ಸದನದಲ್ಲಿ ವಿವರಿಸಿದರು.
ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಸಚಿವರು ಉತ್ತರವನ್ನು ಓದಿ ಮುಗಿಸಿದ್ದಾರೆ ಎಂದು ಆಕ್ಷೇಪಿಸಿದರು. ಮೃತಪಟ್ಟವರ ಕುಟುಂಬಗಳಿಗೆ ಏನು ಪರಿಹಾರ ನೀಡಲಾಗಿದೆ? ಮೃತಪಟ್ಟವರ ವಿರುದ್ಧ ಯಾವುದೇ ಅರಣ್ಯ ಇಲಾಖೆ ಪ್ರಕರಣಗಳಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಾಗಿದ್ದರೆ ಘಟನೆ ಹೇಗೆ ನಡೆದಿದೆ? ಎಂಬುದರ ಬಗ್ಗೆ ಸರ್ಕಾರ ಸಮಗ್ರವಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಹಳೆಯ ವಾಹನಗಳಿಗೆ ಇ10 ಪೆಟ್ರೋಲೇ ಇರಲಿ : ಎಥನಾಲ್ ಮಿಶ್ರಣದ ಬಗ್ಗೆ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರ ಸಲಹೆ!


















