ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ ಸುತ್ತಮುತ್ತ ವಾಸಿಸುವ ಸಾರ್ವಜನಿಕರಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಟೋಲ್ ಪ್ಲಾಜಾಗಳ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯೇತರ ವಾಹನ ಮಾಲೀಕರಿಗಾಗಿ ರಿಯಾಯಿತಿ ದರದ ವಾರ್ಷಿಕ ‘ಲೋಕಲ್ ಫಾಸ್ಟ್ಯಾಗ್ ಪಾಸ್’ (Concessional Local Pass) ಸೌಲಭ್ಯವನ್ನು ನವೆಂಬರ್ 1ರಿಂದ ಜಾರಿಗೆ ತರಲಾಗುತ್ತಿದೆ. ಟೋಲ್ ಪ್ಲಾಜಾ ಇರುವ ಪ್ರದೇಶ ಮತ್ತು ಪುರಸಭೆ ಗಡಿಯ ಆಧಾರದ ಮೇಲೆ ಈ ಪಾಸ್ ಗೆ 1,500 ರೂ. ಅಥವಾ 3,000 ರೂ. ವಾರ್ಷಿಕ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಆದೇಶದಂತೆ, ಸ್ಥಳೀಯ ಪುರಸಭೆ ಅಥವಾ ನಗರಸಭೆ ಗಡಿಯಿಂದ ಹೊರಗಿರುವ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ದರ 1,500 ರೂ. ಆಗಿರಲಿದೆ. ಅದೇರೀತಿ, ನಗರಸಭೆ ಗಡಿಯ ಒಳಗಿರುವ ಟೋಲ್ ಪ್ಲಾಜಾಗಳಿಗೆ ಈ ದರ 3,000 ರೂ. ಇರಲಿದೆ. 20 ಕಿ.ಮೀ ವ್ಯಾಪ್ತಿಯಲ್ಲಿರುವ ಮಾನ್ಯ ಫಾಸ್ಟ್ಯಾಗ್ ಹೊಂದಿರುವ ವಾಹನ ಸವಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ ಪಾಸ್ ಅಥವಾ ಈ ಹೊಸ ವಾರ್ಷಿಕ ಲೋಕಲ್ ಪಾಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಪಾಸ್ ನಿರ್ದಿಷ್ಟ ಟೋಲ್ ಪ್ಲಾಜಾಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇದನ್ನು ಬೇರೆಡೆಗೆ ವರ್ಗಾಯಿಸಲು ಬರುವುದಿಲ್ಲ.
ಈ ಹಿಂದೆ ಸ್ಥಳೀಯ ನಿವಾಸಿಗಳು ಮಾಸಿಕ ಪಾಸ್ ಗಳಿಗಾಗಿ ತಿಂಗಳಿಗೆ 360 ರೂ.ನಂತೆ ವಾರ್ಷಿಕವಾಗಿ ಸುಮಾರು 4,320 ರೂ. ಪಾವತಿಸಬೇಕಿತ್ತು. ಆದರೆ ನವೆಂಬರ್ 1 ರಿಂದ ಬರುವ ಈ ನೂತನ ವಾರ್ಷಿಕ ಪಾಸ್ ನಿಂದಾಗಿ ಪ್ರಯಾಣಿಕರಿಗೆ ವಾರ್ಷಿಕ ಕನಿಷ್ಠ 2,820 ರೂ. ಉಳಿತಾಯವಾಗಲಿದೆ.
ಆದರೆ ‘ಕ್ಲೋಸ್ಡ್ ಯೂಸರ್ ಫೀ ಕಲೆಕ್ಷನ್ ಸಿಸ್ಟಮ್’ ಅಥವಾ ಪ್ರಯಾಣಿಕರಿಗೆ ಪರ್ಯಾಯ ಹಾಗೂ ಸರ್ವಿಸ್ ರಸ್ತೆಗಳು ಲಭ್ಯವಿರುವ ಕೆಲವು ನಿರ್ದಿಷ್ಟ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲಿ ಈ ಲೋಕಲ್ ಪಾಸ್ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದೇಶಾದ್ಯಂತ ಲಕ್ಷಾಂತರ ವಾಹನ ಸವಾರರಿಗೆ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿಯಮಗಳು-2026ರ ಅಡಿಯಲ್ಲಿ ಈ ತಿದ್ದುಪಡಿಯನ್ನು ತರಲಾಗಿದೆ.
ಇದನ್ನೂ ಓದಿ:ಬಾಹ್ಯಾಕಾಶ ಇಲಾಖೆಯಲ್ಲಿ ಅಕೌಂಟ್ಸ್ ಆಫೀಸರ್ ಹುದ್ದೆಗಳ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ



















